ಕೇಂದ್ರ ಸರಕಾರದ ನೀತಿಗಳಿಂದ ರಾಜ್ಯಗಳ ಮೇಲೆ ವಿತ್ತೀಯ ಒತ್ತಡ:ಸಿದ್ದರಾಮಯ್ಯ
ಬೆಂಗಳೂರು, 25 ಮಾರ್ಚ್ (ಹಿ.ಸ.): ಆ್ಯಂಕರ್:ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಸ್ತೃತ ಉತ್ತರ ನೀಡುತ್ತಾ, ರಾಜ್ಯದ ವಿತ್ತೀಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ಸವಾಲುಗಳು ಎದುರಾಗುತ್ತಿವೆ ಎಂದು ಹೇಳಿದರು. ದಕ್ಷಿಣ
Cm session


ಬೆಂಗಳೂರು, 25 ಮಾರ್ಚ್ (ಹಿ.ಸ.):

ಆ್ಯಂಕರ್:ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಸ್ತೃತ ಉತ್ತರ ನೀಡುತ್ತಾ, ರಾಜ್ಯದ ವಿತ್ತೀಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ಸವಾಲುಗಳು ಎದುರಾಗುತ್ತಿವೆ ಎಂದು ಹೇಳಿದರು.

ದಕ್ಷಿಣ ಭಾರತದ ಪ್ರಗತಿಶೀಲ ರಾಜ್ಯಗಳೊಂದಿಗೆ ಹೋಲಿಕೆ ಮಾಡಿದರೂ ಕರ್ನಾಟಕದ ವಿತ್ತೀಯ ಕೊರತೆ ನಿಗದಿತ ಮಿತಿಯೊಳಗೇ ಇದೆ ಎಂದು ಸಿಎಂ ಸ್ಪಷ್ಟಪಡಿಸಿದರು. 2025-26ರ ಪರಿಷ್ಕೃತ ಅಂದಾಜಿನ ಪ್ರಕಾರ ರಾಜ್ಯದ ಫಿಸ್ಕಲ್ ಡಿಫಿಸಿಟ್ ಶೇ.2.95ರಷ್ಟಿದ್ದು, ಮಹಾರಾಷ್ಟ್ರದಲ್ಲಿ ಶೇ.3.0, ಆಂಧ್ರಪ್ರದೇಶದಲ್ಲಿ ಶೇ.4.5, ಕೇರಳದಲ್ಲಿ ಶೇ.3.8 ಹಾಗೂ ತಮಿಳುನಾಡಿನಲ್ಲಿ ಶೇ.3.5ರಷ್ಟಿದೆ ಎಂದು ಮಾಹಿತಿ ನೀಡಿದರು.

ರಾಜಸ್ವ ಕೊರತೆ ಕುರಿತು ಮಾತನಾಡಿದ ಅವರು, “ಸಾಮಾನ್ಯವಾಗಿ ರೆವೆನ್ಯೂ ಡಿಫಿಸಿಟ್ ಇರಬಾರದು. ಆದರೆ ಕೇಂದ್ರ ಸೇರಿ ಬಹುತೇಕ ರಾಜ್ಯಗಳಲ್ಲಿ ಇದು ಕಂಡುಬರುತ್ತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲೇ ಕಡಿಮೆ ಮಟ್ಟದ ರಾಜಸ್ವ ಕೊರತೆ ಇದೆ” ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ, “ರಾಜಸ್ವ ಸಂಗ್ರಹಣೆಯಲ್ಲಿ ಕುಸಿತದಿಂದ ಬಜೆಟ್ ಪರಿಷ್ಕರಣೆ ಮಾಡಲಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರ. ಪಕ್ಕದ ರಾಜ್ಯಗಳಲ್ಲೂ ಅಂದಾಜಿಗಿಂತ ವಾಸ್ತವ ಸಂಗ್ರಹಣೆ ಕಡಿಮೆಯಾಗಿದೆ” ಎಂದು ಹೇಳಿದರು.

ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯ ಪರಿಣಾಮ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ ಎಂದು ಅವರು ಹೇಳಿದರು. ದರ ಪರಿಷ್ಕರಣೆಗೆ ಮೊದಲು ಜಿ.ಎಸ್.ಟಿ ಮಾಸಿಕ ಸಂಗ್ರಹಣೆಯಲ್ಲಿ ಶೇ.10ರಷ್ಟು ಬೆಳವಣಿಗೆ ಕಂಡುಬಂದಿದ್ದು, ನಂತರ ಅದು ಶೇ.4ಕ್ಕೆ ಇಳಿಕೆಯಾಗಿದೆ. ಇದರಿಂದ 2025-26ರಲ್ಲಿ ₹10,000 ಕೋಟಿ ಹಾಗೂ 2026-27ರಲ್ಲಿ ₹15,000 ಕೋಟಿ ಕೊರತೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದರು. 2025-26ರಲ್ಲಿ ರಾಜಸ್ವ ಕೊರತೆ ₹22,957 ಕೋಟಿಗೆ ತಲುಪುವ ಸಾಧ್ಯತೆಯಿದೆ ಎಂದರು.

ಜಿ.ಎಸ್.ಟಿ ದರ ಪರಿಷ್ಕರಣೆಯಿಂದ ಜನರಿಗೆ ಹೆಚ್ಚಿನ ಲಾಭವಾಗಿಲ್ಲ ಎಂದು ಟೀಕಿಸಿದ ಸಿಎಂ, “ಕಾರು, ಬೈಕ್ ಬೆಲೆ ಸ್ವಲ್ಪ ಕಡಿಮೆಯಾಗಿದ್ದು ಬಿಟ್ಟರೆ ಜನರಿಗೆ ಪ್ರಯೋಜನವಾಗಿಲ್ಲ. ಕಾರ್ಪೊರೇಟ್ ಸಂಸ್ಥೆಗಳೇ ಲಾಭ ಪಡೆದುಕೊಂಡಿವೆ” ಎಂದರು.

ಆದಾಗ್ಯೂ, ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ಏರಿಕೆ ನಿರೀಕ್ಷಿಸಲಾಗಿದ್ದು, ಕಳೆದ ವರ್ಷದ ₹2.92 ಲಕ್ಷ ಕೋಟಿಯಿಂದ ಈ ವರ್ಷ ₹3.15 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕೇಂದ್ರದ ತೆರಿಗೆ ಹಂಚಿಕೆ ಕುರಿತು ಮಾತನಾಡಿದ ಅವರು, 14ನೇ ಹಣಕಾಸು ಆಯೋಗದಲ್ಲಿ ಶೇ.4.713 ಇದ್ದ ಪಾಲು 15ನೇ ಆಯೋಗದಲ್ಲಿ ಶೇ.3.647ಕ್ಕೆ ಇಳಿಕೆಯಾಗಿದ್ದು, ಇದು ಶೇ.23ರಷ್ಟು ಕುಸಿತವಾಗಿದೆ ಎಂದು ಹೇಳಿದರು. 16ನೇ ಹಣಕಾಸು ಆಯೋಗವು ಶೇ.4.131ರಷ್ಟು ಪಾಲು ಶಿಫಾರಸು ಮಾಡಿದ್ದು, ಇದು ಹಿಂದಿನಿಗಿಂತ ಶೇ.13ರಷ್ಟು ಹೆಚ್ಚಳವಾದರೂ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯ “ಸರ್ಪ್ಲಸ್ ಬಜೆಟ್” ಕುರಿತಾಗಿ ಪ್ರತಿಕ್ರಿಯಿಸಿದ ಸಿಎಂ, “ಎಲ್ಲಾ ಬಜೆಟ್‌ಗಳಲ್ಲೂ ಫಿಸ್ಕಲ್ ಡಿಫಿಸಿಟ್ ಇದ್ದೇ ಇರುತ್ತದೆ. ಜಿ.ಎಸ್.ಟಿ ಪರಿಹಾರ ಒಟ್ಟಿಗೆ ಬಿಡುಗಡೆಯಾದ ಕಾರಣ ಆ ಅವಧಿಯಲ್ಲಿ ಸರ್ಪ್ಲಸ್ ಕಂಡುಬಂದಿತು” ಎಂದು ಹೇಳಿದರು.

ಜಿ.ಎಸ್.ಟಿ ಪರಿಹಾರ ನಿಲುಗಡೆ ಮತ್ತು ಕೇಂದ್ರದ ನೀತಿಗಳ ಪರಿಣಾಮವಾಗಿ ರಾಜ್ಯಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದರು. 2023-24 ಮತ್ತು 2024-25ರಲ್ಲಿ ಕ್ರಮವಾಗಿ ₹30,871 ಕೋಟಿ ಮತ್ತು ₹40,368 ಕೋಟಿ ಕೊರತೆ ಉಂಟಾಗಿದ್ದು, 15ನೇ ಹಣಕಾಸು ಆಯೋಗದ ಕಡಿಮೆ ಹಂಚಿಕೆಯಿಂದ 2023-26 ಅವಧಿಯಲ್ಲಿ ₹39,500 ಕೋಟಿ ನಷ್ಟವಾಗಿದೆ ಎಂದರು.

2019-2022 ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ₹57,351 ಕೋಟಿ ಜಿ.ಎಸ್.ಟಿ ಪರಿಹಾರ ಸಿಕ್ಕಿದ್ದರೆ, 2023ರಿಂದ ಅದು ನಿಲ್ಲಿಸಲಾಗಿದೆ ಎಂದು ಹೇಳಿದರು. 2017ರಲ್ಲಿ ಜಿ.ಎಸ್.ಟಿ ಜಾರಿಗೆ ಬಂದ ಬಳಿಕ ಒಟ್ಟಾರೆ ₹2 ಲಕ್ಷ ಕೋಟಿ ಕ್ಕೂ ಹೆಚ್ಚು ನಷ್ಟ ರಾಜ್ಯಕ್ಕೆ ಉಂಟಾಗಿದೆ ಎಂದು ಸಿಎಂ ಅಂದಾಜಿಸಿದರು.

“ಇಷ್ಟೆಲ್ಲ ಸವಾಲುಗಳ ನಡುವೆಯೂ ರಾಜ್ಯವನ್ನು ಮುನ್ನಡೆಸುತ್ತಿದ್ದೇವೆ. ಕೇಂದ್ರದ ಅನ್ಯಾಯ, ಜಿ.ಎಸ್.ಟಿ ಪರಿಹಾರ ನಿಲುಗಡೆ, ತೆರಿಗೆ ಹಂಚಿಕೆ ಕಡಿತ ಮತ್ತು ಅನುದಾನ ತಡೆ – ಇವುಗಳೇ ರಾಜಸ್ವ ಕೊರತೆಗೆ ಪ್ರಮುಖ ಕಾರಣಗಳು” ಎಂದು ಸಿಎಂ ತಮ್ಮ ಉತ್ತರದಲ್ಲಿ ಸ್ಪಷ್ಟಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande