
ಪಾಟ್ನಾ, 24 ಮಾರ್ಚ್ (ಹಿ.ಸ.)
ಆ್ಯಂಕರ್:
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜನತಾದಳ (ಯುನೈಟೆಡ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಇದು ಅವರ ನಾಲ್ಕನೇ ಅವಧಿಯಾಗಿದ್ದು, ಅವರು 2028ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಮಧ್ಯಾಹ್ನ ಅಧಿಕೃತ ಘೋಷಣೆ ನಡೆಯಲಿದ್ದು, ಚುನಾವಣಾ ಅಧಿಕಾರಿ ಅನಿಲ ಹೆಗಡೆ ಅವರು ಅವರಿಗೆ ಚುನಾವಣಾ ಪ್ರಮಾಣಪತ್ರ ಹಸ್ತಾಂತರಿಸಲಿದ್ದಾರೆ. ನಿತೀಶ್ ಕುಮಾರ್ ಏಕೈಕ ಅಭ್ಯರ್ಥಿಯಾಗಿದ್ದರಿಂದ, ಚುನಾವಣಾ ಪ್ರಕ್ರಿಯೆ ಕೇವಲ ಔಪಚಾರಿಕತೆಯಾಗಿ ಉಳಿಯಿತು.
ಮಾರ್ಚ್ 19ರಂದು ದೆಹಲಿಯ ಜೆಡಿಯು ರಾಷ್ಟ್ರೀಯ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದ್ದರು ಎಂದು ಪಕ್ಷದ ಕಾರ್ಯಾಧ್ಯಕ್ಷ ಸಂಜಯ ಜಾ ತಿಳಿಸಿದ್ದಾರೆ. ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ್ದ ಗಡುವಿನೊಳಗೆ ಯಾವುದೇ ಇತರ ಅಭ್ಯರ್ಥಿಗಳು ಮುಂದಾಗದ ಹಿನ್ನೆಲೆಯಲ್ಲಿ, ಅವರ ಮರು ಆಯ್ಕೆ ಸುಗಮವಾಗಿ ನೆರವೇರಿತು.
ಜೆಡಿಯು ಪಕ್ಷದಲ್ಲಿ ನಾಯಕತ್ವದ ಬದಲಾವಣೆಗಳ ನಡುವೆ, ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಪ್ರಮುಖ ಸ್ಥಾನಕ್ಕೇರಿರುವುದು ಗಮನಾರ್ಹ. 2016ರಲ್ಲಿ ಶರದ್ ಯಾದವ್ ರಾಜೀನಾಮೆ ಬಳಿಕ ಅವರು ಮೊದಲ ಬಾರಿಗೆ ಅಧ್ಯಕ್ಷರಾದರು. 2019ರಲ್ಲಿ ಮರು ಆಯ್ಕೆಯಾಗಿದ್ದು, 2020ರಲ್ಲಿ ಹುದ್ದೆಯನ್ನು ಆರ್.ಪಿ.ಸಿಂಗ್ ಅವರಿಗೆ ಹಸ್ತಾಂತರಿಸಿದ್ದರು. ಬಳಿಕ ರಾಜೀವ ರಂಜನ್ ಸಿಂಗ್ ಅಧ್ಯಕ್ಷರಾಗಿದ್ದು, ಡಿಸೆಂಬರ್ 2023ರಲ್ಲಿ ರಾಜೀನಾಮೆ ನೀಡಿದ ನಂತರ ಮತ್ತೆ ನಿತೀಶ್ ಕುಮಾರ್ ಪಕ್ಷದ ನೇತೃತ್ವ ವಹಿಸಿಕೊಂಡರು.
ಈ ಮರು ಆಯ್ಕೆಯೊಂದಿಗೆ, ಜೆಡಿಯು ಪಕ್ಷದ ಸಂಘಟನೆಗೆ ಸ್ಥಿರತೆ ತರಲು ಮತ್ತು ಮುಂದಿನ ರಾಜಕೀಯ ತಂತ್ರಗಳಿಗೆ ದಿಕ್ಕು ನೀಡಲು ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa