
ಬಾಗಲಕೋಟೆ, 23 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಅಸ್ಕಿ ಆಸ್ಪತ್ರೆ ಹಾಗೂ ದಿವಂಗತ ಬಿ.ಎಸ್. ಪಾಟೀಲ್ ಫೌಂಡೇಶನ್ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ಮಹಾಶಿಬಿರವನ್ನು ಆಯೋಜಿಸಲಾಯಿತು.
ಆಸ್ಪತ್ರೆ ನಿರ್ದೇಶಕ ವಿಜಯ ಕೆ. ಅಸ್ಕಿ ಅವರ ನೇತೃತ್ವದಲ್ಲಿ ಬಲವಂತರಾಯ ಹಡಲಗೇರಿ ಹೈಸ್ಕೂಲ್ ಮೈದಾನದಲ್ಲಿ ಈ ಶಿಬಿರ ನಡೆಯಿತು. ಶಿಬಿರವನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಆರ್.ಸಿ. ನಾಗಾಂವಿ, ಡಾ. ಗುರುಪ್ರಸಾದ್ ಶಿವಸಿಂಪಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ಹಾಗೂ ಡಾ. ಬಸವರಾಜ ಅಸ್ಕಿ ಅವರು ಮಾತನಾಡಿದರು.
ಕೊಣ್ಣೂರ ಗ್ರಾಮದವರೇ ಆದ ವಿಜಯಕುಮಾರ ಅಸ್ಕಿ ಅವರು ಬಾಗಲಕೋಟೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಬಡಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಂತರ ಮಾತನಾಡಿದ ಆಸ್ಪತ್ರೆ ನಿರ್ದೇಶಕ ವಿಜಯ ಅಸ್ಕಿ ಅವರು ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಚಿಕಿತ್ಸಾ ಸೌಲಭ್ಯಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಅಸ್ಕಿ ಫೌಂಡೇಶನ್ ವತಿಯಿಂದ ಅಧ್ಯಕ್ಷ ಸಿ.ಬಿ. ಅಸ್ಕಿ ಅವರು ವಿಜಯ ಅಸ್ಕಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮಕ್ಕೆ ಕೊಣ್ಣೂರಿನ ಪೂಜ್ಯ ಶ್ರೀನಾಥ ಹಿರೇಮಠ ಅವರು ನೇತೃತ್ವ ವಹಿಸಿದ್ದರು. ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿಬಿರದಲ್ಲಿ ಹೃದಯ ರೋಗ, ಸ್ತ್ರೀರೋಗ ಮತ್ತು ಪ್ರಸೂತಿ, ಮೂತ್ರಪಿಂಡದ ಸಮಸ್ಯೆಗಳು, ಎಲುಬು ಮತ್ತು ಕೀಲು ರೋಗಗಳು, ಸಕ್ಕರೆ ಕಾಯಿಲೆ, ಮಕ್ಕಳ ಚಿಕಿತ್ಸೆ, ಮೂಗು–ಕಿವಿ–ಗಂಟಲು ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಜೊತೆಗೆ ಇಸಿಜಿ ಹಾಗೂ 2D ಎಕೋ ಪರೀಕ್ಷೆಗಳನ್ನೂ ಮಾಡಲಾಯಿತು.
ಒಟ್ಟು 607 ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಇವರಲ್ಲಿ 18 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ 45 ಜನರಿಗೆ ಇಸಿಜಿ ಹಾಗೂ ಇಕೋ ಪರೀಕ್ಷೆ ನಡೆಸಲಾಗಿದೆ.
ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಅಸ್ಕಿ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿ, ಸಾಸನೂರ ಪಾಟೀಲ, ಅಸ್ಕಿ ಕುಟುಂಬದ ಸದಸ್ಯರು, ಕೊಣ್ಣೂರ ಗ್ರಾಮದ ಹಿರಿಯರು ಹಾಗೂ ಶಾಲೆಯ ಸಿಬ್ಬಂದಿ ಭಾಗವಹಿಸಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande