ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಶೀಘ್ರ: ಅಡಿವೇಶ ಇಟಗಿ
ವಿಜಯಪುರ, 18 ಮಾರ್ಚ್ (ಹಿ.ಸ.) ಆ್ಯಂಕರ್ : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ತೀರ್ಮಾನಿಸಿದ್ದು, ಶೀಘ್ರದಲ್ಲೇ ಇದರ ರೂಪರೇಷೆ ಪ್ರಕಟಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ತಿಳಿಸಿದರು. ವಿಜಯಪುರ ನಗರದ ಮ
ಅಭೆ


ವಿಜಯಪುರ, 18 ಮಾರ್ಚ್ (ಹಿ.ಸ.)

ಆ್ಯಂಕರ್ : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ತೀರ್ಮಾನಿಸಿದ್ದು, ಶೀಘ್ರದಲ್ಲೇ ಇದರ ರೂಪರೇಷೆ ಪ್ರಕಟಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ತಿಳಿಸಿದರು.

ವಿಜಯಪುರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಭೇಟಿ ನೀಡಿ, ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಪೂರಕ ವಾತಾವರಣ ಹೊಂದಿರುವ ಜಿಲ್ಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಾಹಿತ್ಯಾಸಕ್ತಿ ಹೊಂದಿರುವ 18 ವರ್ಷದೊಳಗಿನ ಮಕ್ಕಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳ ಮಕ್ಕಳಿಗೂ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ಹಾಗೂ ಶಿಕ್ಷಕರ ಮೌಲ್ಯಮಾಪನ ಪ್ರಕ್ರಿಯೆ ಇರುವ ಹಿನ್ನೆಲೆಯಲ್ಲಿ, ಜೂನ್ ಮೊದಲ ವಾರದಲ್ಲಿ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆಸಿ, ಜೂನ್ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲಿರುವ ಮಕ್ಕಳ ಸಾಹಿತಿಗಳ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ-ಸೂಚನೆ ಪಡೆಯಲಾಗುವುದು ಎಂದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆ, ಸುರಕ್ಷತೆ ಮತ್ತು ಭದ್ರತೆಗಾಗಿ ಇಲಾಖೆಯ ಎಲ್ಲ ಅಧಿಕಾರಿಗಳು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಅಧಿಕಾರಿಗಳು ಮಕ್ಕಳ ಹಬ್ಬ ಮಾದರಿಯಲ್ಲಿ ಜಾನಪದ ಗೀತೆ, ಸಾಹಿತ್ಯ ಸ್ಪರ್ಧೆಗಳು, ಸ್ವರಚಿತ ಕವನ ವಾಚನ, ನೃತ್ಯ, ನಾಟಕ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲೆ ಮತ್ತು ಸ್ಪರ್ಧೆಗಳನ್ನು ಸಮ್ಮೇಳನದ ಅಂಗವಾಗಿ ಆಯೋಜಿಸಬಹುದೆಂದು ಅಭಿಪ್ರಾಯಪಟ್ಟರು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಿ, ಪ್ರತಿ ಜಿಲ್ಲೆಯಿಂದ ಸಾಹಿತ್ಯಾಸಕ್ತಿ ಹೊಂದಿರುವ ಐದು ಮಕ್ಕಳನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸುವ ಬಗ್ಗೆ ಚರ್ಚಿಸಲಾಯಿತು.

ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರು, ಸಮ್ಮೇಳನಕ್ಕೂ ಮುನ್ನ ಮಕ್ಕಳ ರಥ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಸ್ತಾವನೆ ಮಾಡಿದರು. ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande