ಕಾಣೆಯಾದ ಮಕ್ಕಳ ಪತ್ತೆಗಾಗಿ ರಚನೆಯಾದ ವಿಶೇಷ ಕಾರ್ಯಪಡೆಯ ಸಭೆ
ಕೊಪ್ಪಳ , 18 ಮಾರ್ಚ್ (ಹಿ.ಸ.): ಆ್ಯಂಕರ್ : ಅಪಹರಣಕ್ಕೊಳಗಾದ ಹಾಗೂ ಕಾಣೆಯಾದ ಮಕ್ಕಳ ಪ್ರಕರಣಗಳ ವಿಶ್ಲೇಷಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳೇ ಬಾಧಿತರಾಗಿರುವುದು ಕಂಡು ಬಂದಿದ್ದು, ಮಕ್ಕಳಿಗೆ ಸೂಕ್ತ ತಿಳುವಳಿಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿ
ಕಾಣೆಯಾದ ಮಕ್ಕಳ ಪತ್ತೆಗಾಗಿ ರಚನೆಯಾದ ವಿಶೇಷ ಕಾರ್ಯಪಡೆಯ ಸಭೆ


ಕೊಪ್ಪಳ , 18 ಮಾರ್ಚ್ (ಹಿ.ಸ.):

ಆ್ಯಂಕರ್ : ಅಪಹರಣಕ್ಕೊಳಗಾದ ಹಾಗೂ ಕಾಣೆಯಾದ ಮಕ್ಕಳ ಪ್ರಕರಣಗಳ ವಿಶ್ಲೇಷಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳೇ ಬಾಧಿತರಾಗಿರುವುದು ಕಂಡು ಬಂದಿದ್ದು, ಮಕ್ಕಳಿಗೆ ಸೂಕ್ತ ತಿಳುವಳಿಕೆ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ ಅವರು ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಪತ್ತೆಗಾಗಿ ರಚನೆಯಾದ ವಿಶೇಷ ಕಾರ್ಯಪಡೆಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ರಿಟ್ ಪಿಟಿಷನ್ 75/2012ರ ತೀರ್ಪಿನಲ್ಲಿ ಮಕ್ಕಳ ಕಾಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಪಹರಣ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ನಡೆಸುವಂತೆ ಆದೇಶಿಸಿದೆ. ಜಿಲ್ಲೆಯಲ್ಲಿ ದಾಖಲಾದ ಆಪಹರಣ ಪ್ರಕರಣಗಳನ್ನು ವಿಶ್ಲೇಷಿಸಲಾಗಿ ಬಹುತೇಕ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳೇ ಭಾದಿತರಾಗಿದ್ದಾರೆ. ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಅಪಹರಣಕ್ಕೊಳಗಾದವರು 16-18 ವರ್ಷದೊಳಗಿನ ಹೆಣ್ಣು ಮಕ್ಕಳಾಗಿರುವುದರಿಂದ ಈ ಪ್ರಕರಣಗಳನ್ನು ಅಧ್ಯಯನದಲ್ಲಿ ಪ್ರೀತಿ-ಪ್ರೇಮದ ಹೆಸರಿನಲ್ಲಿ ಪಾಲಕರನ್ನು, ಮನೆಯನ್ನು ತೊರೆದು ಹೋದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರಡಿಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳೊಂದಿಗಿನ ಸಮ್ಮತ ಲೈಂಗಿಕ ಚಟುವಟಿಕೆಗಳು ಸಹ ಅಪರಾಧಗಳೆಂದು ಪರಿಗಣಿಸಲಾಗುತ್ತದೆ. ಹಾಗೂ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಇದರಿಂದ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಬಹುದಾದ ಸಾಧ್ಯತೆ ಅಧಿಕವಾಗಿವೆ. ಮಕ್ಕಳು ತಿಳಿದೋ-ತಿಳಿಯದೆಯೋ ಈ ಕಾಯ್ದೆಯಡಿಯಲ್ಲಿ ಭಾದಿತರಾಗುತ್ತಿದ್ದಾರೆ.

ಸರಕಾರವು ಶಾಲೆ, ಕಾಲೇಜು ಮತ್ತು ವಸತಿ ನಿಲಯಗಳಲ್ಲಿ ಹಾಗೂ ಸಮುದಾಯಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ಮತ್ತಷ್ಟು ಜಾಗೃತಿಯನ್ನು ಮೂಡಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಸೂಚಿಸಿದೆ. ಆದ್ದರಿಂದ ನಿಮ್ಮ ವ್ಯಾಪ್ತಿಯ ಸಂಸ್ಥೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಈ ಕುರಿತು ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಿ ಎಂದು ಭಾಗೀದಾರರ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಪಾಲಕರು ಸಹ ಮಕ್ಕಳ ಪೊಷಣೆ ಮತ್ತು ರಕ್ಷಣೆಯು ಪ್ರಮುಖ ಜವಾಬ್ದಾರಿಯಾಗಿದ್ದು, ಮಕ್ಕಳಿಗೆ ಸೂಕ್ತ ತಿಳುವಳಿಕೆಯನ್ನು ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹೇಮಂತಕುಮಾರ, ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ ಕಡಗದ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ನೇತ್ರಾ ಪಾಟೀಲ್, ಪ್ರತಿಭಾ ಕಾಶೀಮಠ ಹಾಗೂ ವಿಸ್ತಾರ ಮತ್ತು ಕಲ್ವಾರಿ ಚಾಪೆಲ್ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಪೊಲೀಸ್ ಠಾಣೆಗಳ ಆರಕ್ಷಕ ಉಪ-ನಿರೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಕಾಣೆಯಾದ ಮಕ್ಕಳ ಪಾಲಕರು, ಸಂಬಂಧಿಕರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande