
ಗದಗ, 18 ಮಾರ್ಚ್ (ಹಿ.ಸ.):
ಆ್ಯಂಕರ್:
ಸರಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗಿಂತಲೂ ಕಮ್ಮಿ ಇಲ್ಲ. ಸೂಕ್ತ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣ ದೊರೆತರೆ ಸರ್ಕಾರಿ ಶಾಲೆಗಳೂ ಅತ್ಯುತ್ತಮ ಸಾಧನೆ ಮಾಡುತ್ತವೆ,” ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಸ್ಪಂದನ, ವಿದ್ಯಾಂಜಲಿ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಪೇಂಟಿಂಗ್, ಗೋಡೆ ಬರಹ, ಚಿತ್ರಕಲೆ ಹಾಗೂ ಕಲಿಕೋಪಕರಣಗಳ ಹಸ್ತಾಂತರ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಂಘವಿ ಮೂವರ್ಸ್ ಲಿಮಿಟೆಡ್, ಸಂಗ್ರೀನ್ ಫ್ಯೂಚರ್ ರಿನ್ಯೂವಬಲ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಸ್ಪಂದನ ಸೇವಾ ಟ್ರಸ್ಟ್ (ರಿ) ಹಡಿನಬಾಳ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 2025-26ನೇ ಸಾಲಿನ ಸಿ.ಎಸ್.ಆರ್ ನಿಧಿಯಡಿ ಅಂದಾಜು 15 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಈ ಯೋಜನೆಯಡಿ ಶಾಲೆಗೆ ಆಕರ್ಷಕ ಪೇಂಟಿಂಗ್ ಹಾಗೂ ಗೋಡೆ ಬರಹಗಳನ್ನು ಮಾಡಲಾಗಿದ್ದು, ಸ್ಮಾರ್ಟ್ ಕ್ಲಾಸ್ ಯೂನಿಟ್, ಶುದ್ಧ ಕುಡಿಯುವ ನೀರಿನ ಘಟಕ, ಝೆರಾಕ್ಸ್ ಯಂತ್ರ, ಗಣಿತ, ವಿಜ್ಞಾನ ಹಾಗೂ ಎನ್.ಸಿ.ಸಿ ಸಂಬಂಧಿತ ಉಪಕರಣಗಳನ್ನು ಒದಗಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ವಾತಾವರಣ ಸುಧಾರಣೆಯಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಲಿದೆ.
ಶಾಸಕ ಪಾಟೀಲ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿದ್ದ ಖಾಸಗಿ ಕಂಪನಿಗಳ ಸಿ.ಎಸ್.ಆರ್ ಅನುದಾನವನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಈ ದಿಸೆಯಲ್ಲಿ ಕಾರ್ಯನಿರ್ವಹಿಸಿದ ಸಾಂಘವಿ ಮೂವರ್ಸ್ ಲಿಮಿಟೆಡ್ ಹಾಗೂ ಸ್ಪಂದನ ಸೇವಾ ಟ್ರಸ್ಟ್ನ ಸೇವೆಯನ್ನು ಪ್ರಶಂಸಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ಇಂತಹ ಯೋಜನೆಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮತ್ತು ಆಧುನಿಕ ಕಲಿಕಾ ವಿಧಾನಗಳನ್ನು ಪರಿಚಯಿಸಲು ಈ ಸೌಲಭ್ಯಗಳು ನೆರವಾಗಲಿವೆ ಎಂದರು.
ಕಾರ್ಯಕ್ರಮವು ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆ ಮತ್ತು ನಾಡಗೀತೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಹನುಮವ್ವ ರೇ. ಕಿನ್ನಾಳ ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಹೆಗಡೆ ಅವರು, ಸಂಸ್ಥೆಯ ಕಾರ್ಯಪಥ, ಸಾಮಾಜಿಕ ಬದ್ಧತೆ ಹಾಗೂ ಗ್ರಾಮ ಸ್ಪಂದನ ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ಈ ಯೋಜನೆ ಗ್ರಾಮೀಣ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ವಿನಾಯಕ ಆರ್. ಬಂಡಾ ಅವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಸಂಗ್ರೀನ್ ಫ್ಯೂಚರ್ ರಿನ್ಯೂವಬಲ್ ಪ್ರೈವೇಟ್ ಲಿಮಿಟೆಡ್ನ ಸೈಟ್ ಮ್ಯಾನೇಜರ್ ಕ್ಷೇತ್ರಮೋಹನ ಸಾಹು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಉಪನಿರ್ದೇಶಕ ಆರ್.ಎಸ್. ಬುರಡಿ, ಕ್ಷೇತ್ರಮೋಹನ ಸಾಹು, ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥೆ ಸುಜಾತಾ, ಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಹೆಗಡೆ ಹಾಗೂ ಮುಖ್ಯೋಪಾಧ್ಯಾಯ ವಿನಾಯಕ ಆರ್. ಬಂಡಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ, ಸಿ.ಆರ್.ಪಿ ಡಿ.ಎಸ್. ಕಳಕಣ್ಣವರ, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಗ್ರಾಮಸ್ಥರು ಹಾಗೂ ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು. ವೇದಮೂರ್ತಿ ಫಕೀರಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಗೋಪಾಲಕೃಷ್ಣ ನಾಯ್ಕ ನಡೆಸಿ, ಸಹಶಿಕ್ಷಕಿ ವಿದ್ಯಾವತಿ ವಂದಿಸಿದರು.
ಒಟ್ಟಾರೆ, ಗ್ರಾಮ ಸ್ಪಂದನ–ವಿದ್ಯಾಂಜಲಿ ಯೋಜನೆಯಡಿ ನಡೆದ ಈ ಕಾರ್ಯಕ್ರಮವು ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ದಿಕ್ಕು ತೋರಿಸುವಂತದ್ದಾಗಿದ್ದು, ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಹೊಸ ವಿಶ್ವಾಸ ಮೂಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP