ಲಕ್ಷೇಶ್ವರ ಸಾರಿಗೆ ಘಟಕಕ್ಕೆ ನಾಲ್ಕು ನೂತನ ಬಸ್ ಗಳು
ಗದಗ, 18 ಮಾರ್ಚ್ (ಹಿ.ಸ.) ಆ್ಯಂಕರ್: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಲಕ್ಷೇಶ್ವರ ಸಾರಿಗೆ ಘಟಕಕ್ಕೆ ಸಾರಿಗೆ ಇಲಾಖೆಯಿಂದ ನಾಲ್ಕು ನೂತನ ಬಸ್ಗಳನ್ನು ಮಂಜೂರು ಮಾಡಲಾಗಿದೆ. ಸರಳ ಸಮಾರಂಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಪೂಜ
ಫೋಟೋ


ಗದಗ, 18 ಮಾರ್ಚ್ (ಹಿ.ಸ.)

ಆ್ಯಂಕರ್: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಲಕ್ಷೇಶ್ವರ ಸಾರಿಗೆ ಘಟಕಕ್ಕೆ ಸಾರಿಗೆ ಇಲಾಖೆಯಿಂದ ನಾಲ್ಕು ನೂತನ ಬಸ್ಗಳನ್ನು ಮಂಜೂರು ಮಾಡಲಾಗಿದೆ. ಸರಳ ಸಮಾರಂಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸುವ ಮೂಲಕ ಬಸ್ಗಳಿಗೆ ಚಾಲನೆ ನೀಡಿದರು.

ಲಕ್ಷೇಶ್ವರ ಘಟಕದ ವತಿಯಿಂದ ಈ ನೂತನ ಬಸ್ಗಳು ರವಿವಾರದಿಂದಲೇ ಸಂಚಾರ ಆರಂಭಿಸಿದ್ದು, ಲಕ್ಷೇಶ್ವರ–ಶ್ರೀ ಕ್ಷೇತ್ರ ಸಿಗಂದೂರು ಹಾಗೂ ಲಕ್ಷೇಶ್ವರ–ಡಾವಣಗೇರೆ ಮಾರ್ಗಗಳಲ್ಲಿ ನಿತ್ಯ ಸೇವೆ ನೀಡಲಿವೆ. ಈ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, “ಈ ಭಾಗದ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವುದು ನಮ್ಮ ಆದ್ಯತೆ. ವಿಶೇಷವಾಗಿ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ತಾಯಿ ದರ್ಶನಕ್ಕೆ ತೆರಳುವ ಭಕ್ತರಿಗೆ ಈ ಬಸ್ಗಳು ಹೆಚ್ಚು ಅನುಕೂಲವಾಗಲಿವೆ” ಎಂದು ಹೇಳಿದರು.

ಇದೇ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹಾಗೂ ಹಿರಿಯ ವಕೀಲ ಎಸ್.ಪಿ. ಬಳಿಗಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲಕ್ಷೇಶ್ವರ ಸಾರಿಗೆ ಘಟಕಕ್ಕೆ ಇದುವರೆಗೆ ಸುಮಾರು 14 ನೂತನ ಬಸ್ಗಳನ್ನು ಒದಗಿಸಲಾಗಿದೆ. ‘ಶಕ್ತಿ’ ಯೋಜನೆ ಜಾರಿಯಾದ ನಂತರ ಸಾರಿಗೆ ನಿಗಮ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯದಿಂದ ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಸುನೀಲ್ ಮಹಾಂತಶೆಟ್ಟರ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ವಾ.ಕ.ರ.ಸಾ.ಸ. ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಪರಶುರಾಮ ಗಡೇದ, ಲಕ್ಷೇಶ್ವರ ಘಟಕ ವ್ಯವಸ್ಥಾಪಕಿ ಸವಿತಾ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಚಾಲಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

ನೂತನ ಬಸ್ಗಳ ಚಾಲನೆ ಮೂಲಕ ಈ ಭಾಗದ ಜನರಿಗೆ ಸಂಚಾರ ಸುಲಭವಾಗುವುದರ ಜೊತೆಗೆ ಧಾರ್ಮಿಕ, ಶಿಕ್ಷಣ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande