ಗದಗದಲ್ಲಿ ವಿಪತ್ತು ನಿರ್ವಹಣೆಯ ಪ್ರಾತ್ಯಕ್ಷಿಕೆ
ಗದಗ, 18 ಮಾರ್ಚ್ (ಹಿ.ಸ.) ಆ್ಯಂಕರ್: ವಿಪತ್ತು ಸಂಭವಿಸಿದಾಗ ಕ್ಷಣಾರ್ಧದಲ್ಲೇ ಸರಿಯಾದ ನಿರ್ಧಾರ ಕೈಗೊಳ್ಳುವುದು ಎಷ್ಟು ಅಗತ್ಯವೋ ಅದನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಗದಗದಲ್ಲಿ ಭರ್ಜರಿ ವಿಪತ್ತು ನಿರ್ವಹಣಾ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆ
ಫೋಟೋ


ಫೋಟೋ


ಗದಗ, 18 ಮಾರ್ಚ್ (ಹಿ.ಸ.)

ಆ್ಯಂಕರ್: ವಿಪತ್ತು ಸಂಭವಿಸಿದಾಗ ಕ್ಷಣಾರ್ಧದಲ್ಲೇ ಸರಿಯಾದ ನಿರ್ಧಾರ ಕೈಗೊಳ್ಳುವುದು ಎಷ್ಟು ಅಗತ್ಯವೋ ಅದನ್ನು ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಗದಗದಲ್ಲಿ ಭರ್ಜರಿ ವಿಪತ್ತು ನಿರ್ವಹಣಾ ಪ್ರಾತ್ಯಕ್ಷಿಕೆ ನಡೆಸಲಾಯಿತು. ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ನಡೆದ ಈ ಕಾರ್ಯಕ್ರಮ ಜನರಲ್ಲಿ ಹೆಚ್ಚಿನ ಕುತೂಹಲ ಹಾಗೂ ಜಾಗೃತಿ ಮೂಡಿಸಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡದ ನೈಜ ಕಾರ್ಯಚಟುವಟಿಕೆ. ತಂಡದ ಮುಖ್ಯಸ್ಥ ಕಮಲೇಶ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಕಟ್ಟಡ ಕುಸಿತದ ಅಣಕು ಪರಿಸ್ಥಿತಿಯನ್ನು ನಿರ್ಮಿಸಿ, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಜೀವಂತವಾಗಿ ಪ್ರದರ್ಶಿಸಲಾಯಿತು.

ಅವಶೇಷಗಳೊಳಗೆ ಸಿಲುಕಿರುವವರ ಪತ್ತೆ, ವಿಶೇಷ ಸಾಧನಗಳ ಬಳಕೆ, ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದು ತುರ್ತು ಚಿಕಿತ್ಸೆಗೆ ಸಾಗಿಸುವ ಕ್ರಮಗಳನ್ನು ಹಂತ ಹಂತವಾಗಿ ತೋರಿಸಲಾಯಿತು. ಈ ವೇಳೆ ಸಮಯ ನಿರ್ವಹಣೆ, ತಂಡದ ಸಂಯೋಜನೆ ಹಾಗೂ ತ್ವರಿತ ಕಾರ್ಯಾಚರಣೆಯ ಮಹತ್ವವನ್ನು ಸ್ಪಷ್ಟವಾಗಿ ತಿಳಿಸಲಾಯಿತು.

ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಲವು ಉಪಯುಕ್ತ ಮಾರ್ಗದರ್ಶನ ನೀಡಲಾಯಿತು. ಕಟ್ಟಡ ಕುಸಿತದಂತಹ ವಿಪತ್ತುಗಳ ಸಂದರ್ಭದಲ್ಲಿ ಗಾಬರಿಯಾಗದೆ ಶಾಂತವಾಗಿರುವುದು, ತಕ್ಷಣ ಸುರಕ್ಷಿತ ಸ್ಥಳಕ್ಕೆ ಸರಿಯುವುದು, ತುರ್ತು ಸೇವೆಗಳಿಗೆ ಮಾಹಿತಿ ನೀಡುವುದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗದಂತೆ ಗುಂಪಾಗದಿರುವುದು ಮುಂತಾದ ಅಂಶಗಳನ್ನು ವಿವರಿಸಲಾಯಿತು. ಜೊತೆಗೆ ಗಾಯಾಳುಗಳಿಗೆ ನೀಡಬೇಕಾದ ಪ್ರಾಥಮಿಕ ಚಿಕಿತ್ಸೆ ಕುರಿತು ಪ್ರಾಯೋಗಿಕವಾಗಿ ತಿಳಿಸಲಾಯಿತು. ವಿದ್ಯಾರ್ಥಿಗಳ ಪಾಲಿಗೆ ಈ ಕಾರ್ಯಕ್ರಮ ನೈಜ ಕಲಿಕೆಯ ವೇದಿಕೆಯಾಗಿ ಪರಿಣಮಿಸಿತು. ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, ರಕ್ಷಣಾ ಕಾರ್ಯದ ಸೂಕ್ಷ್ಮತೆಗಳನ್ನು ಸಮೀಪದಿಂದಲೇ ಅರಿತುಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, “ವಿಪತ್ತುಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಆದರೆ ನಾವು ಮುಂಚಿತವಾಗಿ ಸಿದ್ಧರಾಗಿದ್ದರೆ ಜೀವಹಾನಿ ಮತ್ತು ಆಸ್ತಿ ನಷ್ಟವನ್ನು ಕಡಿಮೆ ಮಾಡಬಹುದು. ಇದರಲ್ಲಿ ಸಾರ್ವಜನಿಕರ ಜಾಗೃತಿ ಮತ್ತು ಸಹಕಾರ ಅತ್ಯಂತ ಮುಖ್ಯ,” ಎಂದು ಹೇಳಿದರು.

ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರೆಗೌಡ್ರ, ಪ್ರಾಚಾರ್ಯ ರೇಖಾ ಸೇನಾವಣೆ, ವಿಪತ್ತು ತಜ್ಞ ಶಿವಾನಂದ ರಾಜನಾಳ, ವಸಂತ ಮಡ್ಲೂರ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತುರ್ತು ಸಾಮಗ್ರಿಗಳ ಸರಿಯಾದ ಬಳಕೆ

ವಿಪತ್ತು ಸಂದರ್ಭಗಳಲ್ಲಿ ಬಳಸುವ ತುರ್ತು ಸಾಮಗ್ರಿಗಳ ಕುರಿತು ಎನ್ಡಿಆರ್ಎಫ್ ತಂಡವು ಪ್ರಾಯೋಗಿಕ ಮಾಹಿತಿ ನೀಡಿತು. ಸ್ಟ್ರೆಚರ್, ಕಟಿಂಗ್ ಟೂಲ್ಗಳು, ರೋಪ್ಗಳು, ಲೈಫ್ ಡಿಟೆಕ್ಷನ್ ಸಾಧನಗಳ ಬಳಕೆ ಹಾಗೂ ಅವುಗಳ ಅಗತ್ಯತೆಯನ್ನು ವಿವರಿಸಲಾಯಿತು.

ಇದಲ್ಲದೆ, ಮನೆಮಟ್ಟದಲ್ಲೇ ತುರ್ತು ಕಿಟ್ ಸಿದ್ಧವಾಗಿರಬೇಕೆಂದು ಸಲಹೆ ನೀಡಲಾಗಿದ್ದು, ಟಾರ್ಚ್, ಪ್ರಾಥಮಿಕ ಚಿಕಿತ್ಸೆ ಪೆಟ್ಟಿಗೆ, ಕುಡಿಯುವ ನೀರು, ಅಗತ್ಯ ಔಷಧಿಗಳು ಹಾಗೂ ತುರ್ತು ಸಂಪರ್ಕ ಸಂಖ್ಯೆಗಳ ಪಟ್ಟಿಯನ್ನು ಹೊಂದಿರಬೇಕು ಎಂದು ತಿಳಿಸಲಾಯಿತು.

ಪ್ರಾತ್ಯಕ್ಷಿಕೆಯ ಇನ್ನೊಂದು ಪ್ರಮುಖ ಆಕರ್ಷಣೆ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದ ತರಬೇತಿ ಪಡೆದ ನಾಯಿಯ ಚಾತುರ್ಯವಾಗಿತ್ತು. ಅವಶೇಷಗಳಡಿ ಸಿಲುಕಿರುವವರನ್ನು ತನ್ನ ಘ್ರಾಣ ಶಕ್ತಿಯಿಂದ ವೇಗವಾಗಿ ಪತ್ತೆಹಚ್ಚಿ, ರಕ್ಷಣಾ ಸಿಬ್ಬಂದಿಗೆ ಸೂಚನೆ ನೀಡುವ ದೃಶ್ಯ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.

ನಾಯಿಯ ಕಾರ್ಯಕ್ಷಮತೆ ನೋಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ಷಣಾ ಕಾರ್ಯದಲ್ಲಿ ಪ್ರಾಣಿಗಳ ಪಾತ್ರವೂ ಎಷ್ಟು ಮಹತ್ವದ್ದೆಂಬುದು ಈ ಮೂಲಕ ಸ್ಪಷ್ಟವಾಯಿತು.

ಒಟ್ಟಾರೆಯಾಗಿ, ಈ ವಿಪತ್ತು ನಿರ್ವಹಣಾ ಪ್ರಾತ್ಯಕ್ಷಿಕೆ “ವಿಪತ್ತು ಬಂದಾಗ ಮಾತ್ರ ಸಿದ್ಧರಾಗುವುದಕ್ಕಿಂತ ಮುಂಚೆಯೇ ಜಾಗೃತರಾಗಬೇಕು” ಎಂಬ ಸಂದೇಶವನ್ನು ಬಲವಾಗಿ ಸಾರಿದ್ದು, ಸಾರ್ವಜನಿಕರಲ್ಲಿ ಸುರಕ್ಷತಾ ಜಾಗೃತಿ ಹೆಚ್ಚಿಸಲು ಮಹತ್ವದ ಪ್ರಾತ್ಯಕ್ಷಿಕೆಯಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande