


ಬಳ್ಳಾರಿ, 18 ಮಾರ್ಚ್ (ಹಿ.ಸ.):
ಆ್ಯಂಕರ್ : ಮಾದಕ ವ್ಯಸನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ. ಕುಟುಂಬಗಳನ್ನು ವಿಘಟಿಸಿ ಸಮಾಜದಲ್ಲಿ ಅಪರಾಧಗಳನ್ನು ಹೆಚ್ಚಿಸುವ ರಾಷ್ಟ್ರೀಯ ಸವಾಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಬಳ್ಳಾರಿ ನಗರದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾಂಗಣ ಮೈದಾನದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಬೋಧಿ ಫೌಂಡೇಷನ್ ಮತ್ತು ನಾರ್ಕೋಟಿಕ್ಸ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್ಗೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದ ಪುಣ್ಯ ಭೂಮಿಯು ಶ್ರೀಮಂತ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ, ಇಂತಹ ಪವಿತ್ರ ಮಣ್ಣಿನಲ್ಲಿ ಮಾದಕದ್ರವ್ಯಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ಯುವಜನತೆ ಮಾದಕ ವ್ಯಸನದಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ, ಆರೋಗ್ಯವಂತ ಮತ್ತು ಸದೃಢ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು. ನಮ್ಮ ದೇಶದ ಅತಿ ದೊಡ್ಡ ಶಕ್ತಿ ಎಂದರೆ ಅದು ಯುವ ಸಂಪತ್ತು. ಆದರೆ ಇಂದು ಮಾದಕ ದ್ರವ್ಯಗಳ ಜಾಲವು ಈ ಶಕ್ತಿಯನ್ನು ಕುಂದಿಸುತ್ತಿದೆ ಎಂದು ತಿಳಿಸಿದರು.
ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕಾಗಿ ಪ್ರತಿಯೊಂದು ಕಾಲೇಜಿನಲ್ಲಿ 'ಮಾದಕ ದ್ರವ್ಯ ವಿರೋ ಪಡೆ'ಯನ್ನು ರಚಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ವ್ಯಸನದಿಂದ ದೂರವಿರುವುದು ಅಷ್ಟೇ ಅಲ್ಲದೆ, ತಮ್ಮ ಸುತ್ತಮುತ್ತಲಿನವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು.
ಕ್ಯಾಥೋಲಿಕ್ ಬಿಷಪ್ ಹೆನ್ರಿ ಡಿಸೋಜ ಮಾತನಾಡಿ, ನಾವು ಎಲ್ಲಿ ಮತ್ತು ಯಾರಿಗೆ ಹುಟ್ಟುತ್ತೇವೆ ಎಂಬುದು ಮುಖ್ಯವಲ್ಲ. ಜೀವನದಲ್ಲಿ ಯಾವ ಗುರಿಯನ್ನು ತಲುಪುತ್ತೇವೆ ಎಂಬುದು ಮುಖ್ಯ. ಯುವಜನರು ಮಾದಕ ವ್ಯಸನದಿಂದ ಮುಕ್ತರಾಗಿ, ಉನ್ನತ ಸಾಧನೆಯ ಹಾದಿ ಹಿಡಿದಾಗ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದು ತಿಳಿಸಿದರು. ನಾಡಿನ ಹಿರಿಯ ಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಸಾಲುಗಳನ್ನು ಉಲ್ಲೇಖಿಸಿದ ಅವರು, ನಮ್ಮ ದೇಶದಲ್ಲಿ ನಾನಾ ಧರ್ಮ, ಜಾತಿ ಹಾಗೂ ಪಂಥದ ಜನರಿದ್ದಾರೆ. ಆದರೆ ನಾವು ಇಂದು ಹುಡುಕಬೇಕಿರುವುದು ಮನುಷ್ಯತ್ವವನ್ನು. ಮನುಷ್ಯರು ಪ್ರೀತಿ, ಗೌರವ ಹಾಗೂ ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಕಮ್ಮರಚೇಡು ಶ್ರೀಕಲ್ಯಾಣಸ್ವಾಮಿ ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಮಾತನಾಡಿ, ವಿಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಅಜ್ಞಾನ ಮತ್ತು ಅಹಂಕಾರವೂ ಹೆಚ್ಚುತ್ತಿದೆ. ಆರೋಗ್ಯ ಭಾಗ್ಯದ ಮುಂದೆ ಅಧಿಕಾರ ಅಥವಾ ಆಯುಷ್ಯದ ಭಾಗ್ಯವಿದ್ದರೂ ಪ್ರಯೋಜನವಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಆದರೆ ಇಂದು ನಮಗೆ ವಿಷಮುಕ್ತವಾದ ಹಣ್ಣು, ತರಕಾರಿ ಅಥವಾ ಶುದ್ಧವಾದ ಗಾಳಿ ಸಿಗುತ್ತಿಲ್ಲದಿರುವುದು ದುರದೃಷ್ಟಕರ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ, ಸಾಮಾಜಿಕ ಮತ್ತು ನೈತಿಕ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು. ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಈ ದೇಹವು ಮತ್ತೊಬ್ಬರಿಗೆ ಆಸರೆಯಾಗುತ್ತದೆ ಎಂದರೆ ನಾವೆಲ್ಲರೂ ದೇಹದಾನ ಮಾಡಲು ಸಿದ್ಧರಿರಬೇಕು. ನಾವು ಸ್ವಾಮೀಜಿಗಳಾಗಿದ್ದರೂ ಈಗಾಗಲೇ ನೇತ್ರದಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೇಹದಾನ ಮಾಡಲು ಕೂಡ ಸಿದ್ಧರಿದ್ದೇವೆ ಎಂದು ಘೋಷಿಸಿದರು.
ಸಾವಿರಾರು ವಿದ್ಯಾರ್ಥಿಗಳಿಗೆ 'ಮಾದಕ ದ್ರವ್ಯ ಮುಕ್ತ ಭಾರತ'ಕ್ಕಾಗಿ ಪ್ರತಿಜ್ಞಾ ವಿಧಿ ಬೋಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್