ಸವಿತಾ ಸಮಾಜದ ಸಾಲ ಮನ್ನಾಕ್ಕೆ ಆಗ್ರಹ
ಗದಗ, 18 ಮಾರ್ಚ್ (ಹಿ.ಸ.) ಆ್ಯಂಕರ್:- ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲಗಾರರಿಗೆ ನೀಡಲಾಗಿರುವ ರಿಯಾಯಿತಿಗಳನ್ನು ಸವಿತಾ ಸಮಾಜಕ್ಕೂ ವಿಸ್ತರಿಸಬೇಕು ಎಂಬ ಒತ್ತಾಯ ಗದಗ ಜಿಲ್ಲೆಯಲ್ಲಿ ಮತ್ತೆ ಗಟ್ಟಿಯಾಗಿ ಕೇಳಿಬಂದಿದೆ. ಕರೋನಾ ಸಂಕಷ್ಟದಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಿರುವ ಸಾವಿರಾರು ಕ್ಷೌರಿಕ ಕ
Loan


ಗದಗ, 18 ಮಾರ್ಚ್ (ಹಿ.ಸ.)

ಆ್ಯಂಕರ್:- ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲಗಾರರಿಗೆ ನೀಡಲಾಗಿರುವ ರಿಯಾಯಿತಿಗಳನ್ನು ಸವಿತಾ ಸಮಾಜಕ್ಕೂ ವಿಸ್ತರಿಸಬೇಕು ಎಂಬ ಒತ್ತಾಯ ಗದಗ ಜಿಲ್ಲೆಯಲ್ಲಿ ಮತ್ತೆ ಗಟ್ಟಿಯಾಗಿ ಕೇಳಿಬಂದಿದೆ. ಕರೋನಾ ಸಂಕಷ್ಟದಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಿರುವ ಸಾವಿರಾರು ಕ್ಷೌರಿಕ ಕುಟುಂಬಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇತ್ತೀಚೆಗೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಸಾಲ ತೀರಿಸಲು ಅಸಾಧ್ಯವಾಗಿರುವ ಅಸಹಾಯಕರನ್ನು ‘ವಿಶೇಷ ಪ್ರಕರಣ’ವೆಂದು ಪರಿಗಣಿಸಿ ಸಹಾಯ ಮಾಡುವ ಕುರಿತು ವ್ಯಕ್ತಪಡಿಸಿದ ಮಾನವೀಯ ನಿಲುವು ಗಮನಾರ್ಹವಾಗಿದೆ. ಇದೇ ಮಾನವೀಯ ದೃಷ್ಟಿಕೋನವನ್ನು ಸವಿತಾ ಸಮಾಜದ ಕುಲಕಸುಬುದಾರರ ವಿಚಾರದಲ್ಲಿಯೂ ಅನ್ವಯಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಕರೋನಾ ಲಾಕ್ಡೌನ್ನ ಪರಿಣಾಮ ರಾಜ್ಯದ ಲಕ್ಷಾಂತರ ಕ್ಷೌರಿಕರು ತಮ್ಮ ಜೀವನೋಪಾಯ ಕಳೆದುಕೊಂಡಿದ್ದು, ಅನೇಕರು ತಮ್ಮ ಸ್ವಂತ ಅಂಗಡಿಗಳನ್ನು ಮುಚ್ಚುವಂತಾಗಿದೆ. ಈ ಹಿನ್ನಲೆಯಲ್ಲಿ, ದಿನನಿತ್ಯದ ಆದಾಯದ ಮೇಲೆ ಅವಲಂಬಿತರಾಗಿದ್ದ ಕುಟುಂಬಗಳು ಇಂದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪಡೆದ ಸಾಲಗಳು ಅವರಿಗೆ ಭಾರವಾಗಿದ್ದು, ಸಾಲ ತೀರಿಸಲು ಅಸಾಧ್ಯವಾಗುತ್ತಿದೆ. ಆದ್ದರಿಂದ, ಈ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಬಡ ಕುಟುಂಬಗಳನ್ನು ಸಾಲಬಾಧೆಯಿಂದ ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದಲ್ಲದೆ, ರಾಜ್ಯ ಬಜೆಟ್ನಲ್ಲಿ ಘೋಷಿಸಲಾದಂತೆ ₹10 ಲಕ್ಷದವರೆಗಿನ ಸಾಲಗಳಿಗೆ ಕನಿಷ್ಠ ಶೇ.50ರಷ್ಟು ಸಬ್ಸಿಡಿ ನೀಡುವ ಮೂಲಕ ಸಣ್ಣ ಉದ್ಯಮಿಗಳಿಗೆ ಪುನಶ್ಚೇತನ ನೀಡಬೇಕು. ಕ್ಷೌರಿಕ ಸಮುದಾಯವು ಪರಂಪರ ವೃತ್ತಿಯನ್ನು ಅವಲಂಬಿಸಿಕೊಂಡಿರುವುದರಿಂದ, ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಆರ್ಥಿಕವಾಗಿ ಸಬಲಗೊಳಿಸಬೇಕೆಂದು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ಈ ಸಂಬಂಧ, ಗದಗ ಜಿಲ್ಲಾಧಿಕಾರಿಗಳ ಮೂಲಕ ಕೆಲವೇ ದಿನಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಸವಿತಾ ಸಮಾಜ ತಯಾರಿ ನಡೆಸುತ್ತಿದೆ. ಸರ್ಕಾರದಿಂದ ಸಮರ್ಪಕ ಸ್ಪಂದನೆ ಸಿಗದಿದ್ದಲ್ಲಿ, ರಾಜ್ಯಾದ್ಯಂತ ಸವಿತಾ ಸಮಾಜದ ಬಾಂಧವರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೃಷ್ಣಾ ಎಚ್. ಹಡಪದ ಅವರು ಎಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande