
ಕೊಪ್ಪಳ , 18 ಮಾರ್ಚ್ (ಹಿ.ಸ.):
ಆ್ಯಂಕರ್ : ಪ್ರಸ್ತುತ ಬೇಸಿಗೆ ಅವಧಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಹಾಗೂ ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಪಾಲಕರು ಹಾಗೂ ಸಮುದಾಯದವರಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಅವರು ಮನವಿ ಮಾಡಿದ್ದಾರೆ.
ಕಳೆದ 3 ವರ್ಷಗಳಿಂದ ಮಕ್ಕಳು ಬಾವಿ, ಕೆರೆ, ಕಾಲುವೆ ಮತ್ತು ಕೃಷಿ ಹೊಂಡಗಳಲ್ಲಿ ನೀರು ಕುಡಿಯಲು, ಆಟವಾಡಲು ಮತ್ತು ಈಜಾಡಲು ಹೋದಂತಹ ಸಂದರ್ಭಗಳಲ್ಲಿ ಮಕ್ಕಳು ಅಸಹಜವಾಗಿ ಸಾವನ್ನಪ್ಪುತ್ತಿರುವುದು ಜಿಲ್ಲೆಯಲ್ಲಿ ವರದಿಯಾಗಿದೆ. ಇದು ಆಘಾತಕಾರಿ ಸಂಗತಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಕಳೆದ 3 ವರ್ಷಗಳಲ್ಲಿ 2023ನೇ ಸಾಲಿನಲ್ಲಿ-10 ಮಕ್ಕಳು, 2024ನೇ ಸಾಲಿನಲ್ಲಿ-11 ಹಾಗೂ 2025ನೇ ಸಾಲಿನಲ್ಲಿ-3 ಮಕ್ಕಳು ಮೃತಪಟ್ಟಿರುವುದು ವಿಷಾದನೀಯ ಸಂಗತಿಯಾಗಿದೆ.
ಈ ಕಾರಣದಿಂದ ಮಕ್ಕಳಿಗೆ ಅಸುರಕ್ಷಿತವೆನಿಸುವ ವಾತಾವರಣವನ್ನು ಹೋಗಲಾಡಿಸಿ, ಮಕ್ಕಳಿಗಿರುವ ಅಪಾಯದ ಅಂಚುಗಳನ್ನು ಗಮನಿಸಿ ಅವುಗಳಿಂದ ಮಕ್ಕಳನ್ನು ರಕ್ಷಿಸಬೇಕಾಗಿರುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು, ಮಕ್ಕಳು ಬಾವಿ, ಕೆರೆ, ಕಾಲುವೆ ಮತ್ತು ಕೃಷಿ ಹೊಂಡಗಳಲ್ಲಿ ನೀರು ಕುಡಿಯಲು, ಆಟವಾಡಲು ಮತ್ತು ಈಜಾಡಲು ಹೋಗದಂತೆ ಗಮನವಹಿಸಿ ಮಕ್ಕಳ ಜೀವಗಳನ್ನು ರಕ್ಷಿಸಬೇಕು.
ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಮಕ್ಕಳನ್ನು ಆದಷ್ಟು ಹೊರಾಂಗಣಕ್ಕೆ ಬಿಡದೆ, ಒಳಾಂಗಣ ಆಟಗಳಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಬೇಕು. ಮಕ್ಕಳಿಗೆ ನೀರಿನಂಶ ತುಂಬಿರುವ ಹಣ್ಣು-ಹಂಪಲುಗಳು ತಿನ್ನಲು ಹಾಗೂ ಹೆಚ್ಚು ನೀರು ಸೇವನೆ ಮಾಡುವಂತೆ ನೋಡಿಕೊಳ್ಳುವ ಮೂಲಕ ಮಕ್ಕಳನ್ನು ರಕ್ಷಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್