
ಗದಗ, 18 ಮಾರ್ಚ್ (ಹಿ.ಸ.)
ಆ್ಯಂಕರ್:
ಕರ್ನಾಟಕ ರಾಜ್ಯದ ಪ್ರಸಿದ್ಧ ಧಾರ್ಮಿಕ ಪ್ರವಾಸಿ ಕ್ಷೇತ್ರವಾದ ವರವಿಯ ಶ್ರೀಕ್ಷೇತ್ರ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸಕ್ಕೆ ಸರ್ಕಾರದಿಂದ ಮತ್ತೊಂದು ಮಹತ್ವದ ನೆರವು ದೊರೆತಿದೆ. ಮೌನೇಶ್ವರ ಸಮುದಾಯ ಭವನದ ನವೀಕರಣ ಕಾಮಗಾರಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಂಡಿದ್ದು, ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ಸಿಕ್ಕಿದೆ.
ಈ ಕುರಿತು ಕರ್ನಾಟಕ ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪತ್ತಾರ ಮಾತನಾಡಿ, ಪ್ರವಾಸೋದ್ಯಮ ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರು ಅನುದಾನ ಬಿಡುಗಡೆಗೊಳಿಸಿರುವುದು ಸಂತಸದ ವಿಚಾರವಾಗಿದ್ದು, ಇದರಿಂದ ವರವಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆತಿದೆ ಎಂದು ತಿಳಿಸಿದ್ದಾರೆ. ಸಮಸ್ತ ವಿಶ್ವಕರ್ಮ ಸಮಾಜ ಹಾಗೂ ಟ್ರಸ್ಟಿನ ಪರವಾಗಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ವರವಿಯ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ನವೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಸದ್ಯ ಬಿಡುಗಡೆಯಾದ 1 ಕೋಟಿ ರೂ. ಅನುದಾನದಲ್ಲಿ ನೆಲಮಹಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಮೂಲತಃ ಒಟ್ಟು 3 ಕೋಟಿ ರೂ.ಗಳ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದ್ದು, ಮೊದಲ ಹಂತದಲ್ಲಿ 1 ಕೋಟಿ ಬಿಡುಗಡೆಗೊಂಡಿದೆ. ಉಳಿದ 2 ಕೋಟಿ ರೂ.ಗಳ ಅನುದಾನ ಬಿಡುಗಡೆಯಾದ ಬಳಿಕ ಮುಂದಿನ ಹಂತದ ಕಾಮಗಾರಿಯನ್ನು ವೇಗಗೊಳಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟಿನ ಅಧ್ಯಕ್ಷ ಮೋಹನ ನರಗುಂದ ಮಾತನಾಡಿ, ಸಚಿವ ಡಾ. ಎಚ್. ಕೆ. ಪಾಟೀಲ ಅವರು ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುತ್ತಿದ್ದು, ಅನುದಾನ ಬಿಡುಗಡೆ ಮಾಡಿರುವುದು ಶ್ಲಾಘನೀಯ ಕ್ರಮವಾಗಿದೆ ಎಂದರು. ಈ ಕಾರ್ಯದಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯಲಿದ್ದು, ಕ್ಷೇತ್ರದ ಅಭಿವೃದ್ಧಿ ಇನ್ನಷ್ಟು ವೇಗ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಮುದಾಯ ಭವನ ನಿರ್ಮಾಣವು ಪೂರ್ಣಗೊಂಡ ಬಳಿಕ ಯಾತ್ರಿಕರಿಗೆ ವಸತಿ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಕ್ಷೇತ್ರದ ಸೌಕರ್ಯಗಳು ಇನ್ನಷ್ಟು ವಿಸ್ತಾರವಾಗಲಿವೆ. ಇದರಿಂದ ವರವಿ ಮೌನೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.
ಈ ವೇಳೆ ಟ್ರಸ್ಟಿನ ಕೋಶಾಧ್ಯಕ್ಷ ನಿರಂಜನ ಬಡಿಗೇರ, ಸದಸ್ಯರಾದ ಶ್ರೀಧರ ಕೊಣ್ಣೂರ, ಅಭಿಯಂತರರಾದ ಆದರ್ಶ ಹಾಗೂ ಮೌನೇಶ ಬಡಿಗೇರ, ವಿಶ್ವಕರ್ಮ ಮಹಾ ಒಕ್ಕೂಟದ ಗದಗ ಜಿಲ್ಲಾ ಅಧ್ಯಕ್ಷ ನಾಗರಾಜ ಕಮ್ಮಾರ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ವಿಶ್ವನಾಥ ಕಮ್ಮಾರ, ಪತ್ರಕರ್ತ ಮೌನೇಶ ಸಿ. ಬಡಿಗೇರ (ನರೇಗಲ್ಲ), ಸಂಚಾಲಕ ಎಸ್. ಎನ್. ಬಡಿಗೇರ, ಪ್ರಮುಖರಾದ ಪ್ರಕಾಶ ಬಡಿಗೇರ, ವೀರಣ್ಣ ಪತ್ತಾರ ಸೇರಿದಂತೆ ಹಲವರು ಹಾಜರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP