
ಕೋಲಾರ, ೧೬ ಮಾರ್ಚ್ (ಹಿ.ಸ):
ಆಂಕರ್ : ನಾವು ನಡೆದು ಬಂದ ಹಾದಿ ನಮ್ಮ ಬೆವರ ಹನಿಯದ್ದಾಗಿರಬೇಕು. ನಾವು ಶ್ರಮಿಸಿದ ನೆಲಕ್ಕೆ ಧನ್ಯ ಧಾರೆ ಹರಿಸಬೇಕು ಎಂದು ಖ್ಯಾತ ಚಲನ ಚಿತ್ರ ನಟ ಶರತ್ ಲೋಹಿತಾಶ್ವ ನುಡಿದರು.
ಕುಣಿಗಲ್ ಸಮೀಪದ ಭಕ್ತರ ಹಳ್ಳಿಯಲ್ಲಿರುವ ದಯಾ ಭವನದ ಆವರಣದಲ್ಲಿ ರಂಗ ವಿಜಯಾ ಟ್ರಸ್ಟ್ ದಯಾ ಭವನ ಸಹಯೋಗದಲ್ಲಿ ಆಯೋಜಿಸಿದ್ದ ಜಗದೀಶ್ ನಾಯ್ಕ ಅವರ ಶ್ರಮದ ನೆಲಕ್ಕೆ ಧನ್ಯಧಾರೆ ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ತನಗೆ ಜನ್ಮ ಕೊಟ್ಟ ತಂದೆ, ತಾಯಿಗೆ ಬದುಕು ಕೊಟ್ಟ ಭೂಮಿಗೆ, ನಿಜವಾಗಲೂ ಧನ್ಯತಾಭಾವವನ್ನು ತೋರಿದರೆ ಅದು ಇನ್ನೊಬ್ಬರ ಬದುಕಿಗೆ ಆದರ್ಶವಾಗುತ್ತದೆ. ಈ ರೀತಿ ಬದುಕಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಜಗದೀಶ ನಾಯ್ಕ ರವರು ಮಾಡಿರುವ ಈ ಪ್ರಯತ್ನ ನಿಜಕ್ಕೂ ಸಂತಸ ತಂದಿದೆ. ಅವರ ಪ್ರತಿಯೊಂದು ಕವನಗಳಲ್ಲೂ ತಂದೆ, ತಾಯಿ, ಪ್ರಕೃತಿ ಬದುಕು, ಕಾರ್ಮಿಕ ಹೀಗೆ ಎಲ್ಲಾ ಮಜಲುಗಳನ್ನು ದಾಟಿ ಗುರುವಿನ ಬಗ್ಗೆ ಬ್ರಹ್ಮ ಜ್ಞಾನದ ಬಗ್ಗೆ ವಿವರಿಸುತ್ತಾ ಆತ್ಮ ಸಾಕ್ಷಿತ್ಕಾರ ಬಹು ಮುಖ್ಯ ಎಂದು ಹೇಳುವಂತೆ ಕವನಗಳನ್ನು ರಚಿಸಿದ್ದಾರೆ. ಇದು ನಿಜಕ್ಕೂ ಅವಶ್ಯಕತೆ ಇದ್ದ ವಿಷಯವಾಗಿದ್ದು ಅಂತಹ ವಿಷಯವನ್ನು ಅವರು ಆರಿಸಿಕೊಂಡಿರುವುದು ನನಗೆ ಸಂತಸ ತಂದಿದೆ ಎಂದರು.
ವೆಗೋಲ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಪಿ. ಶಿವರಾಂರವರು ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲೂ ಮೌನದ ಪಾಠವಿರುತ್ತದೆ, ಆ ಪಾಠ ನಮಗೆ ಅನೇಕ ವಿಷಯಗಳನ್ನು ಕಲಿಸುತ್ತಾ ಸಾಗುತ್ತದೆ. ಮೌನದ ಸಾಧನೆ ಪ್ರತಿಯೊಬ್ಬರು ಅರ್ಥೈಸಿ ಕೊಂಡರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.
ಹುಬ್ಬಳ್ಳಿಯ ಕೆನ್ ಅಗ್ರಿಟೆಕ್ನ ನ ವಿವೇಕ್ ನಾಯಕ್ ಮಾತನಾಡುತ್ತಾ ಸಾಹಿತ್ಯ ಕೃಷಿ ಸಾಮಾನ್ಯ ವಾದುದಲ್ಲ, ಪ್ರತಿಯೊಬ್ಬರಿಗೂ ಸಾಹಿತ್ಯ ಕೃಷಿ ದಕ್ಕುವುದಿಲ್ಲ. ಆ ನಿಟ್ಟಿನಲ್ಲಿ ಜಗದೀಶ್ ನಾಯಕರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಫಾ. ಜಿನೇಶ್ ಕೆ ವರ್ಕಿ ಅವರು ಮಾತನಾಡುತ್ತಾ ಮನುಷ್ಯ ಬಾಲ್ಯ, ಯೌವನ ಕಳೆದ ಮೇಲೆ ಧಾರ್ಮಿಕತೆಯ ಕಡೆಗೆ ನಡೆಯುವುದು ಸಹಜ, ಅದೇ ರೀತಿ ಜಗದೀಶ್ ನಾಯಕರ ಕಾವ್ಯ ಬಾಲ್ಯ ಯೌವನವನ್ನು ದಾಟಿ ಉದಾತ್ತತೆಯ ಕಡೆಗೆ ಸಾಗಿದೆ, ಇದು ನಿಜಕ್ಕೂ ಅರ್ಥ ಮಾಡಿಕೊಳ್ಳಬೇಕಾದ ಕಾವ್ಯ ಸಂಸ್ಕೃತಿಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ರಾಮಣ್ಣ ಮಾತನಾಡಿ ಒಬ್ಬ ಗುರುವಿಗೆ ತನ್ನ ಶಿಷ್ಯ ತನಗಿಂತ ಎತ್ತರಕ್ಕೆ ಬೆಳೆದರೆ ಅದಕ್ಕಿಂತ ಆನಂದವಿಲ್ಲ ಆದರೆ ಜಗದೀಶ ನಾಯಕರು ನನಗೆ ಯೋಗದ ಶಿಷ್ಯ ಅವರ ಸಾಧನೆ ಅದ್ಭುತ ಎಂದರು.
ರಂಗ ವಿಜಯಾ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಪಲ್ಲವಿ ಮಣಿ ಮಾತನಾಡುತ್ತಾ ಇಂತಹ ಕಾವ್ಯವನ್ನು ನಮ್ಮ ಸಂಸ್ಥೆ ಪ್ರಕಾಶನ ಮಾಡುತ್ತಿರುವುದು ಹೆಮ್ಮೆಯ ವಿಷಯ ಇದು ಮುಂದುವರೆಯಲಿ ಎಂದರು.
ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿ.ಸಿ. ರಮೇಶ್ ಮಾತನಾಡಿ ಇವರ ಕವನಗಳು ನಾರಾಯಣ ಗುರುಗಳ ಆದರ್ಶದ ಪಾಠಗಳು ಎನ್ನುವ ರೀತಿಯಲ್ಲಿ ಕಾಣುತ್ತಿದೆ ಅವರು ಈ ರೀತಿಯ ಪುಟ್ಟ ಹೆಜ್ಜೆ ಇಟ್ಟಿರುವುದು ನಿಜಕ್ಕೂ ಸಂತಸ ಎಂದರು.
ಕುಣಿಗಲ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಪನಿ ಪಾಳ್ಯ ರಮೇಶ್ ಮಾತನಾಡಿ ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಹೆಜ್ಜೆಯನ್ನು ಇಡುತ್ತಿರುವುದು ಸಂತಸ ಇನ್ನಷ್ಟು ಮತ್ತಷ್ಟು ಕಾವ್ಯ ಕ್ಷೇತ್ರಕ್ಕೆ ಇವರು ಕೊಡುಗೆ ನೀಡಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ಮಿತ್ರ ಧಾರಾವಾಹಿ ನಟಿ ಗೀತಾ ರಾಘವೇಂದ್ರ, ಮಂಜು ದೊಡ್ಡೀರಪ್ಪ ಡಾ. ಟಿ. ಲಕ್ಷ್ಮೀನಾರಾಯಣ ಡಾ. ನರಸಿಂಹ ಪ್ರಸಾದ್ ಸತೀಶ್, ಗುರುಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು
ಡಾ. ಟಿ ಲಕ್ಷ್ಮಿ ನಾರಾಯಣ್ ಮತ್ತು ಸಂಗಡಿಗರು ಜಗದೀಶ್ ನಾಯ್ಕ ಅವರ ಕವನಗಳನ್ನು ಹಾಡಿದರು. ದಯಾಭವನ ರಮೇಶ್ ವಂದಿಸಿದರು. ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ, ಅಂಕೋಲಾ ಮತ್ತು ಧಾರವಾಡ ದ ಬಂಧು ಮಿತ್ರರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್