
ಬೆಂಗಳೂರು, 16 ಮಾರ್ಚ್ (ಹಿ.ಸ.):
ಆ್ಯಂಕರ್:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಎಲ್‌ಪಿಜಿ ಕೊರತೆಯಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಪೂರ್ಣ ಪ್ರಮಾಣದಲ್ಲಿ ಎಲ್‌ಪಿಜಿ ಗ್ಯಾಸ್ ಪೂರೈಕೆ ನೀಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ತೈಲ ಪೂರೈಕೆ ಕಂಪನಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಎರಡನೇ ಪತ್ರ ಬರೆಯುತ್ತಿದ್ದಾರೆ ಎಂದು ಹೇಳಿದರು. ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿ, ಆಯುಕ್ತರು ಹಾಗೂ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸುಮಾರು ಒಂದು ಗಂಟೆ ಕಾಲ ಸಭೆ ನಡೆಸಲಾಗಿದೆ. ಗ್ರಾಹಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ ಸಚಿವರು, ಡಬಲ್ ಬುಕ್ಕಿಂಗ್ ಮಾಡಬಾರದು ಹಾಗೂ ಗ್ಯಾಸ್ ಮಿತವಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ನಡುವೆ ಗ್ಯಾಸ್ ಸಾಗಿಸುವ ಹಡಗುಗಳ ಸಂಚಾರ ಆರಂಭವಾಗಿದ್ದು, ಅಗತ್ಯ ವಲಯಗಳಿಗೆ ಆದ್ಯತೆ ನೀಡಿ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100 ರಷ್ಟು ಸಿಲಿಂಡರ್ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ದಿನಕ್ಕೆ ಸುಮಾರು 9,500 ಸಿಲಿಂಡರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಲ್ಲಿ 4,200 ಸಿಲಿಂಡರ್‌ಗಳನ್ನು ಅವಶ್ಯಕ ಸೇವಾ ವಲಯಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ ಒಟ್ಟು 4,200 ಜೊತೆಗೆ 1,200 ಸಿಲಿಂಡರ್ ನೀಡಲಾಗುತ್ತದೆ. ಅಗತ್ಯ ಸೇವಾ ವಲಯಗಳಿಗೆ 5,200 ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಜೊತೆಗೆ ಆಟೋಗಳಿಗೆ ಸುಮಾರು 2,250 ಸಿಲಿಂಡರ್ ಪೂರೈಕೆ ಮುಂದುವರಿಸಲಾಗುತ್ತಿದೆ.
ಆದರೆ ಹೋಟೆಲ್‌ಗಳಿಗೆ ಸದ್ಯಕ್ಕೆ ಎಲ್‌ಪಿಜಿ ಪೂರೈಕೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಲ್ಲಿ ಎಲೆಕ್ಟ್ರಿಕ್ ಸ್ಟವ್ ಬಳಕೆ ಮಾಡುವಂತೆ ಹೋಟೆಲ್ ಉದ್ಯಮಿಗಳಿಗೆ ಸಚಿವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಹೋಟೆಲ್‌ಗಳಿಗೆ ದಿನಕ್ಕೆ ಸುಮಾರು 44 ಸಾವಿರ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು ಎಂದು ಸಚಿವರು ವಿವರಿಸಿದರು. ಪರಿಸ್ಥಿತಿ ಸುಧಾರಿಸಿದ ಬಳಿಕ ಹೋಟೆಲ್ ಕ್ಷೇತ್ರಕ್ಕೆ ಪೂರೈಕೆ ಪುನರಾರಂಭಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa