
ಗದಗ, 16 ಮಾರ್ಚ್ (ಹಿ.ಸ.)
ಆ್ಯಂಕರ್:- ಓಡಿಶಾದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ನಡುವೆ, ಕರ್ನಾಟಕದಲ್ಲಿಯೂ ಇದರ ಪ್ರತಿಧ್ವನಿ ಕೇಳಿಬರುತ್ತಿದ್ದು, ಗದಗ ನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಬಿಜೆಪಿ ಪಕ್ಷವು ಈ ಹಿಂದೆ ಕರ್ನಾಟಕದಲ್ಲಿಯೇ ದೇಶಕ್ಕೆ ಕೆಟ್ಟ ರಾಜಕೀಯ ಸಂಸ್ಕೃತಿಯ ಮಾದರಿಯನ್ನು ತೋರಿಸಿದೆ. ಈಗ ಅದೇ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಹೊಸ ರಾಜಕೀಯ ಪ್ರಯೋಗಗಳನ್ನು ನಡೆಸುತ್ತಿದೆ,” ಎಂದು ಆರೋಪಿಸಿದರು.
ಸರ್ಕಾರಗಳನ್ನು ಅಸ್ಥಿರಗೊಳಿಸುವುದು, ಅಡ್ಡ ಮತದಾನಕ್ಕೆ ಪ್ರೋತ್ಸಾಹಿಸುವುದು ಹಾಗೂ ಶಾಸಕರಿಗೆ ಹಣದ ಆಮಿಷವೊಡ್ಡುವುದು ಬಿಜೆಪಿಯ ಕಾರ್ಯವೈಖರಿಯಾಗಿದೆ ಎಂದು ಅವರು ಟೀಕಿಸಿದರು. “ಯಾವುದೇ ಮಾರ್ಗದಿಂದಾದರೂ ಅಧಿಕಾರ ಹಿಡಿಯಬೇಕು ಎಂಬುದು ಅವರ ಏಕೈಕ ಗುರಿಯಾಗಿದೆ. ಜನಮತಕ್ಕೆ ಗೌರವ ಕೊಡದೇ, ಅನೈತಿಕ ವಿಧಾನಗಳ ಮೂಲಕ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ,” ಎಂದು ಹೇಳಿದರು.
ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿಯೂ ಇದೇ ರೀತಿಯ ತಂತ್ರ ಅನುಸರಿಸಲಾಗಿದೆ ಎಂದು ಆರೋಪಿಸಿದ ಅವರು, “ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಪ್ರೇರೇಪಿಸಲು ಪ್ರಯತ್ನ ನಡೆದಿದೆ. ನಿನ್ನೆ ಬಿಡದಿಯಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ. ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ,” ಎಂದು ಹೇಳಿದರು.
ಈ ಸಂಬಂಧ ಪೊಲೀಸರು ಕ್ರಮ ಕೈಗೊಂಡಿದ್ದು, ಈಗಾಗಲೇ ಕೆಲವರನ್ನು ಬಂಧಿಸಿರುವುದಾಗಿ ತಿಳಿಸಿದ ಅವರು, “ಇದು ಬಿಜೆಪಿಯ ಅನೈತಿಕ ರಾಜಕೀಯದ ಮತ್ತೊಂದು ಸ್ಪಷ್ಟ ಉದಾಹರಣೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯುಂಟುಮಾಡುವ ಇಂತಹ ಕೃತ್ಯಗಳನ್ನು ಜನತೆ ತಿರಸ್ಕರಿಸಬೇಕು,” ಎಂದು ಕರೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲ ಇಲ್ಲ: ಸ್ಪಷ್ಟನೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಂತರ ಕಲಹ, ಗೊಂದಲ ಉಂಟಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಚಿವರು, “ಯಾವ ಗೊಂದಲವೂ ಇಲ್ಲ. ಎಲ್ಲಿದೆ ಗೊಂದಲ? ಅಧಿವೇಶನ ಸುಸೂತ್ರವಾಗಿ ನಡೆಯುತ್ತಿದೆ. ಸರ್ಕಾರ ಸ್ಥಿರವಾಗಿದೆ,” ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಆಡಳಿತ ಸಮರ್ಪಕವಾಗಿ ಸಾಗುತ್ತಿದೆ ಎಂದು ಅವರು ಹೇಳಿದರು.
“ಯಾವುದೇ ಬದಲಾವಣೆಗಳಿಲ್ಲ. ಪಕ್ಷದೊಳಗೆ ಯಾರೂ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿಲ್ಲ. ಕೆಲವು ವಲಯಗಳು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ನೀವೇ ಗೊಂದಲ ಸೃಷ್ಟಿಸಿ ನಮ್ಮಿಂದ ಉತ್ತರ ಪಡೆಯಬೇಡಿ,” ಎಂದು ಮಾಧ್ಯಮಗಳ ಮೇಲೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ
ರಾಜ್ಯದ ಎರಡು ಉಪಚುನಾವಣೆಗಳ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದ ಸಚಿವರು, “ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಶೇ.100 ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಯಾವುದೇ ಅನುಮಾನ ಬೇಡ,” ಎಂದು ಹೇಳಿದರು.
ಈ ಚುನಾವಣೆಯಲ್ಲಿ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳೇ ಗೆಲುವಿನ ಆಧಾರವಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ರಾಜ್ಯಗಳಲ್ಲೂ ಯುಪಿಎಗೆ ಮುನ್ನಡೆ ಭರವಸೆ ಇನ್ನೂ ಮುಂದೆ ಮಾತನಾಡಿದ ಅವರು, “ಕೇವಲ ಕರ್ನಾಟಕದಲ್ಲೇ ಅಲ್ಲ, ಕೇರಳ, ಪುದುಚ್ಚೇರಿ ಹಾಗೂ ತಮಿಳುನಾಡು ರಾಜ್ಯಗಳಲ್ಲಿಯೂ ಯುಪಿಎ ಮೈತ್ರಿ ಪಕ್ಷಗಳ ಗೆಲುವು ಖಚಿತ. ಜನರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವ ಪಕ್ಷಗಳ ಪರ ನಿಲ್ಲುತ್ತಾರೆ,” ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP