
ಉಡುಪಿ, 16 ಮಾರ್ಚ್ (ಹಿ.ಸ.):
ಆ್ಯಂಕರ್:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಗ್ಯಾಸ್ ಪೂರೈಕೆಯಲ್ಲಿ ಆತಂಕ ಮೂಡಿರುವ ಸಂದರ್ಭದಲ್ಲೇ ಉಡುಪಿ ಜಿಲ್ಲೆಯ ಕಟಪಾಡಿ ಸಮೀಪ ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದ ಘಟನೆ ಸೋಮವಾರ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.
ಘಟನೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನಗಳ ಸಂಚಾರವನ್ನು ಪೊಲೀಸರು ತಾತ್ಕಾಲಿಕವಾಗಿ ನಿಯಂತ್ರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸಿದರು. ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟ್ಯಾಂಕರ್ ಮೇಲೆ ನಿರಂತರವಾಗಿ ನೀರು ಹಾಯಿಸಿ ಶೀತೀಕರಣ ಮಾಡಲಾಯಿತು.
ನಂತರ ಮಂಗಳೂರಿನಿಂದ ಮತ್ತೊಂದು ಟ್ಯಾಂಕರ್ ತರಿಸಿ ಉರುಳಿ ಬಿದ್ದ ವಾಹನದಲ್ಲಿದ್ದ ಎಲ್‌ಪಿಜಿ ಅನಿಲವನ್ನು ಸುರಕ್ಷಿತವಾಗಿ ವರ್ಗಾವಣೆ ಮಾಡುವ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa