
ವಿಜಯಪುರ, 16 ಮಾರ್ಚ್ (ಹಿ.ಸ.)
ಆ್ಯಂಕರ್ : ಕಿಡ್ನಿ ದಾನ ಮಾಡುವುದರಿಂದ ಗಂಭೀರ ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಬದುಕು ನೀಡಬಹುದು ಎಂದು ಅಯಣ ಚೆನ್ನಬಸಪ್ಪ ಹೇಳಿದರು.
ವಿಜಯಪುರ ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ ಎಮ್ ಪಾಟೀಲ್ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ಆಯೋಜಿಸಿದ್ದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕಿಡ್ನಿ ದಾನ ಮಾಡಿದ ತಾಯಂದಿರು ಅವರಿಗೆ ಎರಡನೇ ಬಾರಿ ಜನ್ಮ ನೀಡಿದಂತಾಗಿದೆ. ಕಿಡ್ನಿ ದಾನ ಮಾಡುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದ ಅವರು, ತಾಯಂದಿರ ತ್ಯಾಗ ಮತ್ತು ಸಮರ್ಪಣೆಯ ಮನೋಭಾವ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ಮೂತ್ರಪಿಂಡ ಕಾಯಿಲೆ ತಡೆಗಟ್ಟಲು ಅನುಸರಿಸಬೇಕಾದ ಆರೋಗ್ಯಕರ ಜೀವನಶೈಲಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.
ಯೂರಾಲಜಿ ವಿಭಾಗದ ಮುಖ್ಯಸ್ಥ ಎಸ್ ಬಿ ಪಾಟೀಲ್
ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದುವರೆಗೆ ನಡೆಸಲಾದ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳ ಕುರಿತು ವಿವರಿಸಿದರು. ಡಯಾಲಿಸಿಸ್ನ ಪ್ರಯೋಜನಗಳು ಹಾಗೂ ಅದರ ಅನಾನುಕೂಲಗಳ ಕುರಿತು ಮಾಹಿತಿ ನೀಡಿದ ಅವರು, ಜೀವಂತ ಅಂಗದಾನ ಹಾಗೂ ಮೃತರ ಅಂಗಾಂಗ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ದಾನಿಗಳು ಹಾಗೂ ಕಿಡ್ನಿ ಕಸಿ ಮಾಡಿಸಿಕೊಂಡ ರೋಗಿಗಳನ್ನು ಸನ್ಮಾನಿಸಲಾಯಿತು. ಯೂರಾಲಜಿ ಮತ್ತು ನೆಫ್ರಾಲಜಿ ವಿಭಾಗಗಳ ವತಿಯಿಂದ ಕಿಡ್ನಿ ದಾನಿಗಳು ಹಾಗೂ ಕಿಡ್ನಿ ಕಸಿ ಮಾಡಿಸಿಕೊಂಡವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವೂ ನಡೆಯಿತು.
ವಿಶ್ವವಿದ್ಯಾಲಯ ವತಿಯಿಂದ ಪ್ರಾರಂಭವಾದ ಅಂಗಾಂಗ ದಾನ ಜಾಗೃತಿ ಜಾಥಾವನ್ನು ವಿಜಯಪುರ ಜಿಲ್ಲಾಧಿಕಾರಿ ಆನಂದ.ಕೆ ಉದ್ಘಾಟಿಸಿದರು.
ಜಾಥಾ ಆಶ್ರಮ ರಸ್ತೆ, ಸಿದ್ದೇಶ್ವರ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ನಡೆಯಿತು. ಈ ವೇಳೆ ಕಿಡ್ನಿ ರೋಗಗಳ ಕುರಿತು ಅರಿವು, ಕಿಡ್ನಿ ಆರೋಗ್ಯ ಕಾಪಾಡುವ ವಿಧಾನಗಳು, ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯತೆ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
ಜಾಥಾದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಫಿಜಿಯೋಥೆರಪಿಸ್ಟ್ಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದರು. ಗಾಂಧಿ ಚೌಕಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಅಂಗಾಂಗ ದಾನದ ಕುರಿತು ಕಿರು ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ, ಕುಲಸಚಿವ, ಪ್ರಾಚಾರ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande