ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಿ: ನ್ಯಾಯಾಧೀಶ ಹರೀಶ ಎ. ಸಲಹೆ
ವಿಜಯಪುರ, 16 ಮಾರ್ಚ್ (ಹಿ.ಸ.) ಆ್ಯಂಕರ್ : ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಸಮಯ ಮತ್ತು ಹಣ ಎರಡೂ ಉಳಿಯುತ್ತವೆ. ಆದ್ದರಿಂದ ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು
ಲೋಕ ಅದಾಲತ್


ವಿಜಯಪುರ, 16 ಮಾರ್ಚ್ (ಹಿ.ಸ.)

ಆ್ಯಂಕರ್ : ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಸಮಯ ಮತ್ತು ಹಣ ಎರಡೂ ಉಳಿಯುತ್ತವೆ. ಆದ್ದರಿಂದ ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹರೀಶ್ ಎ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಕ್ಷಿದಾರರು ತಮ್ಮ ವ್ಯಾಜ್ಯಗಳಿಗೆ ಸಂಬಂಧಿಸಿ ವರ್ಷಗಳ ಕಾಲ ನ್ಯಾಯಾಲಯಗಳಿಗೆ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ಭಾಗವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣಗಳ ಪೈಕಿ 13,624 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ಅವರು ತಿಳಿಸಿದರು.

ಆಸ್ತಿ ವಿಭಾಗ ಸಂಬಂಧಿತ ದಾವೆಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿದ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳು ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ಇತ್ಯರ್ಥಗೊಂಡಿರುವುದು ವಿಶೇಷ ಎಂದರು.

ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ್ ಹಗರಗಿ ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸಾರ್ವಜನಿಕರು ಶೀಘ್ರ ನ್ಯಾಯ ಪಡೆಯಬೇಕು ಹಾಗೂ ಪರಸ್ಪರ ಸೌಹಾರ್ದತೆಯಿಂದ ಸಮಾಜದಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.

ವಿಜಯಪುರ ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ನಡೆದ ಲೋಕ ಅದಾಲತ್ನಲ್ಲಿ 8 ಜೋಡಿಗಳನ್ನು ರಾಜಿ ಸಂಧಾನದ ಮೂಲಕ ವೈವಾಹಿಕ ಜೀವನ ಮುಂದುವರಿಸಲು ಒಪ್ಪಿಸಲಾಯಿತು. ಜೊತೆಗೆ 1009 ಭೂಸ್ವಾಧೀನ ಪ್ರಕರಣಗಳ ಪೈಕಿ 386 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ₹42,28,21,328 ಮೊತ್ತ ರಾಜಿ ಸಂಧಾನದ ಮೂಲಕ ನಿರ್ಧಾರಗೊಂಡಿದೆ ಎಂದು ಮಾಹಿತಿ ನೀಡಿದರು.

ಜನತಾ ನ್ಯಾಯಾಲಯದ ಯಶಸ್ಸಿಗೆ ಸಹಕರಿಸಿದ ವಕೀಲರು, ಕಕ್ಷಿದಾರರು, ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರ ಕಾರ್ಯಕ್ಕೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande