

ವಿಜಯಪುರ, 16 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಮನೆ, ತೋಟದ ಮನೆ, ದೇವಸ್ಥಾನ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದು, ಒಟ್ಟು 22 ಪ್ರಕರಣಗಳಲ್ಲಿ 36 ಆರೋಪಿಗಳನ್ನು ಬಂಧಿಸಿ ಸುಮಾರು ₹1,27,38,800 ಮೌಲ್ಯದ ಬಂಗಾರ-ಬೆಳ್ಳಿ ಆಭರಣಗಳು, ಕಾರುಗಳು ಹಾಗೂ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ತಿಳಿಸಿದ್ದರು.
ಸೋಮವಾರ ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನ ಬಾಗೇವಾಡಿ ಉಪವಿಭಾಗದ ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟಿ, ಬಸವನಬಾಗೇವಾಡಿ, ಕೂಡಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಿವಿಧ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮನಗೌಡ ಹಟ್ಟಿ ಹಾಗೂ ಬಸವನ ಬಾಗೇವಾಡಿ ಉಪವಿಭಾಗದ ಡಿಎಸ್ಪಿ ಬಳ್ಳಪ್ಪಾ ನಂದಗಾವಿ ಅವರ ಮಾರ್ಗದರ್ಶನದಲ್ಲಿ ತನಿಖಾ ತಂಡಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿವೆ ಎಂದು ಹೇಳಿದರು.
ಪೊಲೀಸರು ಬಂಧಿತರಿಂದ ಸುಮಾರು 26 ತೊಲೆ ಬಂಗಾರ, 3.5 ಕೆಜಿ ಬೆಳ್ಳಿ, ಲಕ್ಷಾಂತರ ರೂ. ನಗದು, 02 ಕಾರುಗಳು ಹಾಗೂ 17 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳ, ನಿಡಗುಂದಿ, ತಾಳಿಕೋಟಿ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆ, ತೋಟದ ಮನೆ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣಗಳು ಈ ಕಾರ್ಯಾಚರಣೆಯಲ್ಲಿ ಪತ್ತೆಯಾಗಿವೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಮನೆ ಕಳ್ಳತನ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು ₹51 ಲಕ್ಷ ಮೌಲ್ಯದ ಆಭರಣ ಹಾಗೂ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದೇ ಠಾಣೆಯ ಮತ್ತೊಂದು ಪ್ರಕರಣದಲ್ಲಿ ಸ್ಥಳೀಯ ಆರೋಪಿಯನ್ನು ಬಂಧಿಸಿ ₹7.55 ಲಕ್ಷ ಮೌಲ್ಯದ ಬಂಗಾರ-ಬೆಳ್ಳಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ನಿಡಗುಂದಿ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಕೋರಳಿಂದ ಬಂಗಾರದ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ತಾಳಿಕೋಟಿ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಐದು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ ರೀತಿ ಕೂಡಗಿ ಹಾಗೂ ಬಸವನ ಬಾಗೇವಾಡಿ ಠಾಣೆಗಳ ವ್ಯಾಪ್ತಿಯಲ್ಲಿಯೂ ನಡೆದ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande