
ಜೈಸಲ್ಮೇರ್, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದ್ರೌಪದಿ ಮುರ್ಮು ಅವರು ಶುಕ್ರವಾರ ಜೈಸಲ್ಮೇರ್ ವಾಯುಪಡೆ ನಿಲ್ದಾಣದಿಂದ ಸ್ಥಳೀಯವಾಗಿ ನಿರ್ಮಿತ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ‘ಪ್ರಚಂಡ’ದಲ್ಲಿ ಹಾರಾಟ ನಡೆಸಿ, ಸಹ-ಪೈಲಟ್ ಆಗಿ ಹಾರಿದ ದೇಶದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಬೆಳಿಗ್ಗೆ 9:15ರ ಸುಮಾರಿಗೆ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಗಳಿಗೆ ಹೆಲಿಕಾಪ್ಟರ್ನ ತಾಂತ್ರಿಕ ಸಾಮರ್ಥ್ಯಗಳ ಕುರಿತು ವಿವರಿಸಲಾಯಿತು. ಬಳಿಕ ಅವರು ಕಾಕ್ಪಿಟ್ಗೆ ಹತ್ತಿ, ಬೆಳಿಗ್ಗೆ 10:15ರ ವೇಳೆಗೆ ಗ್ರೂಪ್ ಕ್ಯಾಪ್ಟನ್ ಎನ್.ಎಸ್. ಬಹುವಾ ಅವರೊಂದಿಗೆ ಹಾರಾಟ ಆರಂಭಿಸಿದರು.
ಸುಮಾರು 25 ನಿಮಿಷಗಳ ಹಾರಾಟದಲ್ಲಿ ಗಡಿ ಪ್ರದೇಶಗಳು ಹಾಗೂ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು. ಹಾರಾಟದ ವೇಳೆ ಕಾಕ್ಪಿಟ್ನಿಂದ ಸೆಲ್ಯೂಟ್ ಮಾಡುವ ಮೂಲಕ ಸೈನಿಕರಿಗೆ ಗೌರವ ಸೂಚಿಸಿದರು.
ರಾಷ್ಟ್ರಪತಿ ಮುರ್ಮು ಈ ಹಿಂದೆ ಸುಖೋಯ್ Su-30MKI ಮತ್ತು ಡಸ್ಸಾಲ್ಟ್ ರಫೇಲ್ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿಯಾಗಿದ್ದಾರೆ.
ಜೈಸಲ್ಮೇರ್ನ ಪ್ರಸಿದ್ಧ ಜೈಸಲ್ಮೇರ್ ಕೋಟೆ (ಸೋನಾರ್ ದುರ್ಗ) ಮೇಲೆ ಹಾರುತ್ತಾ, ರೇಡಿಯೋ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, “ಇಂದು ನಾನು ‘ಪ್ರಚಂಡ’ ಹೆಲಿಕಾಪ್ಟರ್ನಲ್ಲಿ ಹಾರುತ್ತಿದ್ದೇನೆ. ಇದು ಸ್ವಾವಲಂಬನೆಯ ಪ್ರಬಲ ಸಂಕೇತವಾಗಿದೆ. ನಮ್ಮ ಧೈರ್ಯಶಾಲಿ ಸೈನಿಕರಿಗೆ ಹೆಮ್ಮೆಯಿಂದ ಧನ್ಯವಾದಗಳು. ಜೈ ಹಿಂದ್, ಜೈ ಭಾರತ್,” ಎಂದು ಹೇಳಿದರು.
ಇಂದು ಸಂಜೆ ಪಾಕಿಸ್ತಾನ ಗಡಿಯ ಸಮೀಪದ ಪೋಖ್ರಾನ್ನಲ್ಲಿ ವಾಯುಪಡೆಯ ಅತಿದೊಡ್ಡ ಯುದ್ಧಾಭ್ಯಾಸ ವಾಯು ಶಕ್ತಿ-2026 ನಡೆಯಲಿದ್ದು, ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕರಾಗಿ ರಾಷ್ಟ್ರಪತಿ ಮುರ್ಮು ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa