ಭಾರತೀಯ ಬ್ಯಾಟ್ಸ್ಮನ್ ರಿಂಕು ಸಿಂಗ್ ತಂದೆ ನಿಧನ
ನಿಂದ
Rinku and father


ನವದೆಹಲಿ, 27 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಟಿ20 ವಿಶ್ವಕಪ್ ಮಧ್ಯೆ ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರಿಗೆ ವೈಯಕ್ತಿಕ ಶೋಕ ಉಂಟಾಗಿದೆ. ಅವರ ತಂದೆ ಖಚಂದ್ರ ಸಿಂಗ್ ಅವರು 4ನೇ ಹಂತದ ಲಿವರ್ ಕ್ಯಾನ್ಸರ್ ನಿಂದ ದೀರ್ಘ ಹೋರಾಟದ ಬಳಿಕ ಇಂದು ಬೆಳಿಗ್ಗೆ 4:36ರ ಸುಮಾರಿಗೆ ನಿಧನರಾದರು.

ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದರು. ವೈದ್ಯರು ನಿರಂತರ ಮೂತ್ರಪಿಂಡ ಚಿಕಿತ್ಸೆ ನೀಡುತ್ತಿದ್ದರೂ, ತೀವ್ರ ನಿಗಾ ಘಟಕದಲ್ಲಿಯೇ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದೊಂದಿಗೆ ಕಾರ್ಯನಿರತರಾಗಿದ್ದ ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯಕ್ಕೂ ಮುನ್ನ ತಂದೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮನೆಗೆ ಮರಳಿದ್ದರು. ಬಳಿಕ ಚೆನ್ನೈನಲ್ಲಿ ತಂಡವನ್ನು ಮರು ಸೇರಿಕೊಂಡಿದ್ದರೂ, ತಂದೆಯ ನಿಧನದ ನಂತರ ಮತ್ತೆ ಮನೆಗೆ ತೆರಳಿದ್ದಾರೆ.

ಈವರೆಗೆ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ರಿಂಕು 24 ರನ್ಗಳನ್ನು ಗಳಿಸಿ ಫಿನಿಷರ್ ಪಾತ್ರ ನಿರ್ವಹಿಸಿದ್ದಾರೆ. ಈಗ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ನಿರ್ಣಾಯಕ ನಾಕೌಟ್ ಪಂದ್ಯಕ್ಕೆ ಅವರ ಲಭ್ಯತೆ ಬಗ್ಗೆ ಅನಿಶ್ಚಿತತೆ ಇದೆ.

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಸಂತಾಪ ಸೂಚಿಸಿ, “ ಖಚಂದ್ರ ಸಿಂಗ್ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಈ ಕಷ್ಟದ ಸಮಯದಲ್ಲಿ ರಿಂಕು ಮತ್ತು ಅವರ ಕುಟುಂಬದೊಂದಿಗೆ ನನ್ನ ಸಂತಾಪಗಳು. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ,” ಎಂದು ತಿಳಿಸಿದ್ದಾರೆ.

ರಿಂಕು ಸಿಂಗ್ ಅವರ ಈ ವೈಯಕ್ತಿಕ ದುಃಖದ ಸಂದರ್ಭದಲ್ಲಿ ಇಡೀ ಕ್ರಿಕೆಟ್ ವಲಯ ಅವರ ಕುಟುಂಬದೊಂದಿಗೆ ನಿಂತು ಸಂತಾಪ ಸೂಚಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande