
ಹಾಸನ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರೈತರಿಗೆ ಆಡಳಿತಾತ್ಮಕ, ಭಾವನಾತ್ಮಕ ಹಾಗೂ ತಾಂತ್ರಿಕವಾಗಿ ವರ್ತಕರು ಸಮರ್ಪಕ ಸಹಕಾರ ನೀಡಬೇಕು ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಮುಂಗಾರು ಹಂಗಾಮಿನ ಆಲೂಗಡ್ಡೆ ಬೆಳೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಚರ್ಚಾಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಸನ ಜಿಲ್ಲೆ ಹಿಂದೆ ಆಲೂಗಡ್ಡೆ ಉತ್ಪಾದನೆಗೆ ಪ್ರಸಿದ್ಧಿಯಾಗಿದ್ದರೂ, ಇತ್ತೀಚೆಗೆ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಎಂದರು.
ರೈತರಿಗೆ ಉತ್ತಮ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಮುಂಗಾರು ಬಿತ್ತನೆಗೆ ಆಲೂಗಡ್ಡೆ ಮಾರಾಟ ಮಾಡುವ ಎಲ್ಲಾ ವರ್ತಕರು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಬೀಜ ಯಾವ ರಾಜ್ಯದಿಂದ, ಯಾವ ತಳಿಯದು, ಗುಣಮಟ್ಟ ಪರಿಶೀಲನೆ ಆಗಿದೆಯೇ ಎಂಬ ಮಾಹಿತಿ ರೈತರಿಗೆ ನೀಡಬೇಕು. ಖರೀದಿ ಚೀಟಿಯಲ್ಲಿ “ಬಿತ್ತನೆಗೆ ಬಳಸುವ ಆಲೂಗಡ್ಡೆ” ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದು ನಿರ್ದೇಶಿಸಿದರು.
ಬಿತ್ತನೆ ಬೀಜಗಳ ಆಯ್ಕೆ, ಖರೀದಿ, ಸಾಗಣೆ, ಶೇಖರಣೆ ಹಾಗೂ ಮಾರಾಟದ ಮೇಲ್ವಿಚಾರಣೆಗೆ ರೈತ ಪ್ರತಿನಿಧಿಗಳನ್ನೊಳಗೊಂಡ ಅಧಿಕಾರಿಗಳ ತಂಡ ರಚಿಸಲು ಸೂಚಿಸಿದರು.
ಹೋಬಳಿಗೊಂದು ಶೈತ್ಯಾಗಾರ ಸ್ಥಾಪನೆ, ಸಸ್ಯ ಸಂರಕ್ಷಣಾ ಔಷಧಿಗಳ ಉಚಿತ ವಿತರಣೆ, ಬೆಳೆ ವಿಮೆ ಹಾಗೂ ಬೆಂಬಲ ಬೆಲೆ ನಿಗದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸೋಮನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಆಲೂಗಡ್ಡೆ ಬೀಜೋತ್ಪಾದನೆಗೆ ಉತ್ತೇಜನ ನೀಡಬೇಕು ಹಾಗೂ ಸಂಶೋಧನಾ ಚಟುವಟಿಕೆಗಳ ಮಾಹಿತಿ ರೈತರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಆಲೂಗಡ್ಡೆ ಮಾರಾಟಗಾರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa