
ಹಾಸನ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತು ಪಾಲಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಹಾಸನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಹೇಮಾವತಿ ಹೇಳಿದರು.
ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣಬೇಕು, ಎಲ್ಲರಿಗೂ ನ್ಯಾಯ, ಗೌರವ ಮತ್ತು ಸೌಲಭ್ಯ ದೊರೆಯಬೇಕು ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಹಾಗೂ ಜೀತ ಪದ್ಧತಿ ತಡೆಯಲು ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ಜೀತದ ಕೆಲಸಕ್ಕೆ ಒಳಗಾದ ಮಕ್ಕಳನ್ನು ರಕ್ಷಿಸುವುದು ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಕರ್ತವ್ಯವೆಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ಪ್ರತಿಮಾಸ ಕಾನೂನು ಅರಿವು ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಸೂಚಿಸಿದರು. ರಸ್ತೆ ನಿಯಮ ಪಾಲನೆಯಿಂದ ಅಪಘಾತಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ದಾಕ್ಷಾಯಿಣಿ ಬಿ.ಕೆ., ಮಕ್ಕಳನ್ನು ಸಾಲದ ಹೆಸರಿನಲ್ಲಿ ಜೀತದಾಳಾಗಿಸುವ ಪ್ರಕ್ರಿಯೆ ಸಂಪೂರ್ಣ ನಿಲ್ಲಬೇಕು ಎಂದರು. ಹಿರಿಯ ವಕೀಲ ಚಂದ್ರಶೇಖರ್ ಜೀತ ಪದ್ಧತಿಯ ಸಾಮಾಜಿಕ ಕಾರಣಗಳನ್ನು ವಿವರಿಸಿ, ಸರ್ಕಾರ ಜಾರಿಗೆ ತಂದಿರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಕೀಲರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa