
ಗದಗ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ತಾಯಿ ಪ್ರೀತಿಗೆ ಯಾವ ಬೆಲೆಯನ್ನೂ ಕಟ್ಟಲು ಸಾಧ್ಯವಿಲ್ಲ. ತಮ್ಮ ಸುಖ,ಸೌಕರ್ಯಗಳನ್ನು ತ್ಯಾಗ ಮಾಡಿ ಮಕ್ಕಳ ಭವಿಷ್ಯಕ್ಕಾಗಿ ಬದುಕನ್ನು ಮುಡಿಪಾಗಿಟ್ಟ ತಾಯಿ–ತಂದೆಯರನ್ನು ವೃದ್ಧಾಶ್ರಮಗಳಲ್ಲಿ ನೋಡಬೇಕಾದ ಸ್ಥಿತಿ ಸಮಾಜದ ವೈಫಲ್ಯವನ್ನು ತೋರಿಸುತ್ತದೆ. ಆದರೆ ಸಭಾಪತಿ ಬಸವರಾಜ ಹೊರಟ್ಟಿ ಅವರು ತಾಯಿಯ ಹೆಸರಲ್ಲಿ ನಡೆಸುತ್ತಿರುವ ಸೇವಾಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅವ್ವ ಸೇವಾ ಟ್ರಸ್ಟ್ – ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಅವ್ವ ಹೊರಟ್ಟಿ ಈ ಕಾರ್ಯಕ್ರಮದ ನೈತಿಕ ಶಕ್ತಿಯಾಗಿದ್ದಾರೆ. ತಾಯಿಯ ಕಾಳಜಿ, ಸಂಸ್ಕಾರ, ಮೌಲ್ಯಗಳು ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ದತ್ತಿ ಪ್ರಶಸ್ತಿ ಸಮಾಜಕ್ಕೆ ದಾರಿದೀಪವಾಗಿದೆ. ಇಂತಹ ತಾಯಿಯ ಹೆಸರಿನ ಪ್ರಶಸ್ತಿಗೆ ತನುಜಾ ನಾಯಕ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.
ಶರಣರ ಬಾಳನ್ನು ಮರಣದಲ್ಲಿ ಕಾಣು ಎನ್ನುವ ಮಾತಿದೆ. ಶರಣರು ಮರಣಾನಂತರವೂ ಜನಮನದಲ್ಲಿ ಜೀವಂತವಾಗಿರುತ್ತಾರೆ. ಇಂದಿನ ಈ ಕಾರ್ಯಕ್ರಮವೇ ಮಾತೋಶ್ರೀ ಗುರವ್ವ ಅವ್ವ ಅವರ ಸಂಸ್ಕಾರ, ಚೈತನ್ಯ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಯಾಗಿದೆ ಎಂದು ಅವರು ವಿವರಿಸಿದರು.
ಮಹಿಳಾ ಸಂವೇದನೆ, ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ ಹಾಗೂ ಜೀವನ ಪ್ರೀತಿಯನ್ನು ಪ್ರತಿಬಿಂಬಿಸುವ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿರುವ ತನುಜಾ ನಾಯಕ ಅವರ “ಸಾಮಾಜಿಕ ನೋಟ” ಇಂದಿನ ಕಿರಿಯ ಪತ್ರಕರ್ತರಿಗೆ ಮಾದರಿಯಾಗಿದೆ. ಆದರ್ಶ ಪತ್ರಿಕೋದ್ಯಮ ಹೇಗಿರಬೇಕು ಎಂಬುದಕ್ಕೆ ಅವರ ಬರವಣಿಗೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಶಂಸಿಸಿದರು.
ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಮಾತನಾಡಿದ ಅವರು, ಗ್ರಾಮೀಣ ಪತ್ರಿಕೋದ್ಯಮ ಎಂದಾಕ್ಷಣ ತಮ್ಮ ಮನಸ್ಸಿಗೆ ತಕ್ಷಣ ನೆನಪಾಗುವ ಹೆಸರು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಎಂದು ಹೇಳಿದರು. ಅವರು ಬರೆದಿರುವ ಕೃತಿ ಗ್ರಾಮೀಣ ಪತ್ರಿಕೋದ್ಯಮದ ಬೈಬಲ್ ಎಂದು ಕರೆಯಬಹುದಾಗಿದೆ. ಈ ಕೃತಿ “ಬರ ಅಂದರೆ ಎಲ್ಲರಿಗೂ ಇಷ್ಟ” ಎಂಬ ಹೆಸರಿನಲ್ಲಿ ಕನ್ನಡಕ್ಕೂ ಅನುವಾದವಾಗಿದೆ ಎಂದು ಸ್ಮರಿಸಿದರು.
ನಗರ ಕೇಂದ್ರಿತ ಪತ್ರಿಕೋದ್ಯಮದಲ್ಲಿ ಅಭಿವೃದ್ಧಿ ಎಂದರೆ ಕೇವಲ ಜಿಡಿಪಿ ಬೆಳವಣಿಗೆ ಅಥವಾ ಷೇರು ಮಾರುಕಟ್ಟೆಯ ಏರಿಳಿತಗಳನ್ನೇ ಬಿಂಬಿಸಲಾಗುತ್ತಿದೆ. ಆದರೆ ನಿಜವಾದ ಅಭಿವೃದ್ಧಿ ಎಂದರೆ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಯೇ ಆಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ಹೇಳಿದರು.
ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದ ಸಂದರ್ಭದಲ್ಲಿ ನಗರ ಕೇಂದ್ರಿತ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿತು. ಆದರೆ ಇಡೀ ದೇಶದ ಆರ್ಥಿಕತೆ ಸಂಪೂರ್ಣ ಕುಸಿಯದಂತೆ ಕಾಪಾಡಿದ್ದು ಗ್ರಾಮೀಣ ಆರ್ಥಿಕತೆಯೇ. ಸಾಸಿವೆ ಡಬ್ಬಿ, ಎಲೆ ಅಡಿಕೆ ಚೀಲಗಳಲ್ಲಿ ಗ್ರಾಮೀಣ ಮಹಿಳೆಯರು ಕಾಪಿಟ್ಟಿದ್ದ ಸಣ್ಣ ಉಳಿತಾಯಗಳು ಕೋವಿಡ್ ಸಮಯದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾದವು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಭಾರತದ ಗ್ರಾಮೀಣಾಭಿವೃದ್ಧಿಗೆ ಪತ್ರಿಕೋದ್ಯಮ ಸೇತುವೆಯಾಗಿ ಕೆಲಸ ಮಾಡಬೇಕಿದೆ. ಮೇಲ್ಮಟ್ಟದ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿ ಹಳ್ಳಿಗಳ ಜನರ ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಲಭ್ಯತೆ, ಕೃಷಿ ಸಮಸ್ಯೆಗಳ ಕುರಿತು ಪತ್ರಿಕೋದ್ಯಮ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಯಾವುದೇ ಜಿಲ್ಲೆಯ ಕೆಡಿಪಿ ಸಭೆಗಳನ್ನು ನಡೆಸುವಾಗ ಮುಖ್ಯಮಂತ್ರಿಗಳು ಆ ಜಿಲ್ಲೆಗಳ ಗ್ರಾಮೀಣ ಬದುಕಿನ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಮೊದಲು ಗಮನಿಸುತ್ತಾರೆ. ಕಲುಷಿತ ನೀರು ಕುಡಿದು ಸಾವು ಸಂಭವಿಸಿದ ವರದಿಗಳು ಸರ್ಕಾರವನ್ನು ಎಚ್ಚರಿಸಿವೆ. ಬೆಳೆರೋಗದ ಕುರಿತ ವರದಿಗಳು ಸಾವಿರಾರು ರೈತ ಕುಟುಂಬಗಳಿಗೆ ಪರಿಹಾರ ಒದಗಿಸಲು ನೆರವಾಗಿವೆ. ಬರ ಹಾಗೂ ಅತಿವೃಷ್ಟಿ ಸಂದರ್ಭದ ವರದಿಗಳು ವಿಧಾನ ಸೌಧದಲ್ಲಿ ತುರ್ತು ಸಭೆಗಳನ್ನು ನಡೆಸಲು ಹಾಗೂ ತ್ವರಿತ ಪರಿಹಾರ ಒದಗಿಸಲು ವೇಗ ನೀಡಿವೆ ಎಂದು ಹೇಳಿದರು.
ಹೀಗಾಗಿ ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸ್ಟುಡಿಯೋಗಳಲ್ಲಿ ಕುಳಿತು ಚರ್ಚೆ ಮಾಡುವುದಕ್ಕಿಂತ ಹಳ್ಳಿಗಳಿಗೆ ತೆರಳಿ ಜನರ ಸಂಕಷ್ಟಗಳನ್ನು ನೇರವಾಗಿ ಆಲಿಸಿ ವರದಿ ಮಾಡುವುದು ಹೆಚ್ಚು ಉಪಯುಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಬರಗಾಲ ಮತ್ತು ಅತಿವೃಷ್ಟಿ ಹೆಸರಿನಲ್ಲಿ ಬಿಡುಗಡೆಯಾಗುವ ಅನುದಾನ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ಗ್ರಾಮೀಣ ಪತ್ರಕರ್ತರು ಗಂಭೀರವಾಗಿ ಪರಿಶೀಲಿಸಿ ವರದಿ ಮಾಡಬೇಕು. ಇಂತಹ ವರದಿಗಳನ್ನು ಮಾನ್ಯ ಮುಖ್ಯಮಂತ್ರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹಾಗೂ ಕೃಷಿ ವಲಯ ಗಂಭೀರ ಬಿಕ್ಕಟ್ಟಿನಲ್ಲಿರುವಾಗ ಗ್ರಾಮೀಣ ಪತ್ರಕರ್ತರು ಸಮಾಜದ ಸೇನಾನಿಗಳಂತೆ ನಿಂತು ಸತ್ಯವನ್ನು ಹೊರತರಬೇಕು ಎಂದು ಕರೆ ನೀಡಿದರು.
ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರವೆಂದರೆ ರೈತರ ಆತ್ಮಹತ್ಯೆಯ ಹಿಂದಿನ ನೈಜ ಸಾಲದ ಬಾಧೆಯನ್ನು ಬಹಿರಂಗಪಡಿಸುವುದು ಹಾಗೂ ಸರ್ಕಾರದ ನೀತಿಗಳು ಕೃಷಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ವಿಶ್ಲೇಷಿಸುವುದಾಗಿದೆ ಎಂದು ಹೇಳಿದರು.
ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದ್ದರೆ, ಆ ಕನ್ನಡಿಯಲ್ಲಿ ಭಾರತದ 70 ಶೇಕಡಾ ಜನಸಂಖ್ಯೆ ಇರುವ ಹಳ್ಳಿಗಳು ಸ್ಪಷ್ಟವಾಗಿ ಕಾಣಬೇಕು. ಹಳ್ಳಿಗಳ ಕಲೆ, ಸಂಸ್ಕೃತಿ, ಭಾಷೆ ಮತ್ತು ಜನರ ದೈನಂದಿನ ಹೋರಾಟಗಳಿಗೂ ಕನ್ನಡಿ ಹಿಡಿಯಬೇಕು. ಈ ಕನ್ನಡಿಯಲ್ಲಿ ವಿಧಾನಸೌಧದಲ್ಲಿ ಕುಳಿತಿರುವ ಅಧಿಕಾರಿಗಳು ತಮ್ಮ ಮುಖ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತ ತನುಜಾ ನಾಯಕ, ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಕುಲಸಚಿವ ಸುರೇಶ್ ನಾಡಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP