
ಶಿವಮೊಗ್ಗ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಮತ್ತು ಕರ್ತವ್ಯವಾಗಿದೆ, ಸರ್ಕಾರ ನೀಡಿರುವ ಯುವನಿಧಿ ಯೋಜನೆಯಂತಹ ಸೌಲಭ್ಯ ಸವಲತ್ತು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಿ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೊಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ. ಎಸ್. ಚಂದ್ರಭೂಪಾಲ್ ಹೇಳಿದರು.
ಅವರು ಇಂದು ಕೈಗಾರಿಕ ತರಬೇತಿ ಇಲಾಖೆ ಮತ್ತು ಉದ್ಯೋಗ ಇಲಾಖೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹ್ಯಾದ್ರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜು ಮತ್ತು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಯುವನಿಧಿ ಯೋಜನೆಯ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಪೊಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಇಚ್ಚಾಶಕ್ತಿಯಿಂದ ವಿದ್ಯಾರ್ಥಿಗಳು ವಿದ್ಯ್ಯಾಭ್ಯಾಸ ಮತ್ತು ಉದ್ಯೋಗದ ಮೇಲೆ ಗಮನಹರಿಸಿ ಯೋಜನೆ ಸದುಪಯೋಗ ಪಡೆದುಕೊಂಡು ಪೋಷಕರ ಆಸೆಗಳನ್ನು ಇಡೇರಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವಾಗ ವಿದ್ಯಾರ್ಥಿಗಳಿಗೆ ಬರುವ ಯುವನಿಧಿ ಹಣಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವಾದ್ದರಿಂದ ಆತಂಕ ಪಡಬೇಕಾಗದ ಅವಶ್ಯಕತೆ ಇಲ್ಲಾ ಎಂದು ಅವರು ಹೇಳಿದರು.
ಸರ್ಕಾರವು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ 2 ವರ್ಷ ಅವಧಿವರೆಗೆ ಯುವನಿಧಿ ಯೋಜನೆಯಡಿ ಎಲ್ಲಾ ವಿದ್ಯಾರ್ಥಿಗಳು ಪದವಿ ಮುಗಿದ ತಕ್ಷಣ ಗ್ರಾಮ್ ಒನ್, ಕರ್ನಾಟಕ ಒನ್, ಮೂಲಕ ಅರ್ಜಿ ಸಲ್ಲಿಸಿದ 6 ತಿಂಗಳ ನಂತರ ಪ್ರತಿ ತಿಂಗಳು ರೂ. 3000 ಹಣವನ್ನು ಯಾವುದೇ ಮಧ್ಯವರ್ತಿ ಇಲ್ಲದೇ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಎಂದರು.
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಧು ಹೆಚ್ಎಂ ಮಾತನಾಡಿ, ಪದವಿ ಮುಗಿಸಿ ಉದ್ಯೋಗ ಪಡೆಯುವಂತ ಯುವಕರಿಗೆ ಸರ್ಕಾರ ನೀಡುವ ಯುವನಿಧಿಯಿಂದ ಬರುವಂತ ರೂ.3000 ಸಹಾಯಧನ ಅತ್ಯಮೂಲ್ಯವಾಗಲಿದೆ ಹಾಗೂ ಸರ್ಕಾರ ನೀಡಿರುವ ಈ ಯೋಜನೆಗಳ ಸದುಪಯೋಗ ಪಡೆದು ಉನ್ನತ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ. ಪದವಿ ಮುಗಿಸಿದ ನಂತರ ಉದ್ಯೋಗ ಪಡೆಯುವ ತನಕ ಜೀವನಕ್ಕೆ ಯುವನಿಧಿ ಸಹಾಯಕವಾಗಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa