
ಚಿತ್ರದುರ್ಗ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದಾವಣಗೆರೆ–ಚಿತ್ರದುರ್ಗ ನೇರ ರೈಲ್ವೇ ಮಾರ್ಗದ ಕಾಮಗಾರಿ 2027ರ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮದ ಬಳಿ ಕಾಮಗಾರಿ ಪ್ರಗತಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಾಮಗಾರಿ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೇವಲ 8-9 ಶೇಕಡಾ ಮಾತ್ರ ಕೆಲಸ ಪೂರ್ಣಗೊಂಡಿದ್ದು, 2027ರ ಜನವರಿಯೊಳಗೆ ಭರಮಸಾಗರವರೆಗೆ ಹಾಗೂ ಜೂನ್ ವೇಳೆಗೆ ಚಿತ್ರದುರ್ಗದವರೆಗೆ ಹಳಿ ನಿರ್ಮಾಣ ಪೂರ್ಣಗೊಳಿಸಿ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.
ತುಮಕೂರು–ದಾವಣಗೆರೆ ನೇರ ರೈಲು ಮಾರ್ಗದಿಂದ ದಾವಣಗೆರೆ–ಬೆಂಗಳೂರು ನಡುವಿನ ದೂರ ಸುಮಾರು 80 ಕಿ.ಮೀ. ಕಡಿಮೆಯಾಗಲಿದ್ದು, ಮಧ್ಯ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಇನ್ನುಮುಂದೆ ಪ್ರತಿ ತಿಂಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಸಹಕರಿಸಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಬೆಳೆ ಬೆಳೆಯಲು ಅವಕಾಶ ಇರುವುದಿಲ್ಲ ಅಡ್ಡಿಪಡಿಸಿದರೆ ಜಿಲ್ಲಾಡಳಿತ ಹಾಗೂ ಪೊಲೀಸರ ನೆರವು ಪಡೆಯಲಾಗುವುದು ಎಂದು ಎಚ್ಚರಿಸಿದರು.
ಈ ಮಾರ್ಗದಲ್ಲಿ ಒಟ್ಟು 192 ರೈಲ್ವೇ ಸೇತುವೆಗಳು ನಿರ್ಮಾಣವಾಗಲಿದ್ದು, ಅಗತ್ಯವಿದ್ದಲ್ಲಿ ಮಾತ್ರ ಹೊಸ ಸೇತುವೆಗಳಿಗೆ ಮನ್ನಣೆ ನೀಡಲಾಗುವುದು ಎಂದರು. ಭರಮಸಾಗರ–ಚಿತ್ರದುರ್ಗ ನಡುವಿನ 28 ಕಿ.ಮೀ. ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು ನೀಡಿದರು.
ಸಂಸದ ಗೋವಿಂದ ಎಂ. ಕಾರಜೋಳ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa