
ವಿಜಯಪುರ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ -ಟಿ.ಎಸ್.ಪಿ ಯೋಜನೆಯಡಿಯಲ್ಲಿ ವಿಜಯಪುರ ನಗರ- ಗ್ರಾಮೀಣ ವಲಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ 8. 9 ಹಾಗೂ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕರ್ನಾಟಕ ದರ್ಶನ ಕಾರ್ಯಕ್ರಮವನ್ನು ನೋಡಲ್ ಏಜೆನ್ಸಿ ಕೆ.ಎಸ್.ಟಿ.ಡಿ.ಸಿ ಮೂಲಕ 5 ದಿನಗಳ ಪ್ರವಾಸ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು, ಪ್ರವಾಸವು ಕೇವಲ ಮನರಂಜನೆಗಾಗಿ ಅಲ್ಲ. ರಾಜ್ಯದ ಭವ್ಯ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತ್ಯಕ್ಷವಾಗಿ ಕಂಡು ತಿಳಿಯುವ ಉತ್ತಮ ಅವಕಾಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಹತ್ವ ಪಠ್ಯಪುಸ್ತಕದಲ್ಲಿ ಓದಿದ ಐತಿಹಾಸಿಕ ತಾಣಗಳನ್ನು ಖುದ್ದಾಗಿ ವೀಕ್ಷಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಪ್ರವಾಸದ ಅವಧಿಯಲ್ಲಿ ಶಿಸ್ತು ಮತ್ತು ಸುರಕ್ಷತೆಯಿಂದ ಇರಬೇಕು. ಶಿಕ್ಷಕರ ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು. ಜೊತೆಗೆ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಇಂತಹ ಸೌಲಭ್ಯಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬರೂ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಪ್ರವಾಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಗ್, ಟಿ-ಶರ್ಟ್, ಕ್ಯಾಪ್ ಇತ್ಯಾದಿ ಒಳಗೊಂಡ ಕಿಟ್ ವಿತರಿಸಲಾಯಿತು. ಮಕ್ಕಳು ಬಸ್ ಏರಿ ಐಹೊಳೆ, ಪಟ್ಟದಕಲ್ಲು, ಬದಾಮಿ, ಹಂಪಿ, ಚಿತ್ರದುರ್ಗ, ಶ್ರೀರಂಗಪಟ್ಟಣ, ಯಡಿಯೂರ, ಮೈಸೂರು ಕಡೆಗೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸುಭಾಶ ಚವ್ಹಾಣ, ಪ್ರವಾಸೋದ್ಯಮ ಇಲಾಖೆಯ , ಕೆ.ಎಸ್.ಟಿ.ಡಿ.ಸಿ. ನಿಗಮದ,ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande