
ವಿಜಯಪುರ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಮ್ಮ ದೇಶದಲ್ಲಿ ಶೇ.70 ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದು, ಗ್ರಾಮ ಅಭಿವೃದ್ಧಿ ಅವಶ್ಯಕತೆಯಿದೆ ಎಂದು ಜಿಪಂ ಸಿಇಒ ರಿಷಿ ಆನಂದ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಮಹಿಳೆಯರ ಸಬಲೀಕರಣ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ರಚಿಸಿ,ಅವುಗಳನ್ನು ಸಾಂಸ್ಥಿಕ ಮತ್ತು ಆರ್ಥಿಕ ಬಲವರ್ಧನೆ ಮಾಡುವುದರ ಜತೆಗೆ ಸಮುದಾಯ ಬಂಡವಾಳ ನಿಧಿ, ಸುತ್ತು ನಿಧಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ತನ್ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಾಗುತ್ತದೆ ಎಂದರು.
ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಬ್ಯಾಂಕ್ ವತಿಯಿಂದ ಸ್ವ-ಸಹಾಯ ಸಂಘಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಹಾಗೂ ಅವರಿಗೆ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಸ್ವ-ಸಹಾಯ ಸಂಘಗಳ ಮಹಿಳೆಯರ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಮುಂಬರುವ ಮಾರ್ಚ್ ತಿಂಗಳೊಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಸಾಲ ವಿತರಿಸಲು ಸೂಚಿಸಿದರು. ಈ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗುತ್ತದೆ ಎಂದರು.
ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಬ್ಯಾಂಕ್ ಖಾತೆ ಮಾಡಿಸುವುದು. ಬ್ಯಾಂಕ್ ವ್ಯವಹಾರದ ನಿಯಮಗಳನ್ನು ಪರಿಚಯಿಸುವುದು ಹಾಗೂ ಸ್ವ-ಸಹಾಯ ಸಂಘಗಳ ಮುಖೇನ ಸಾಲ ಪಡೆದುಕೊಂಡು ಮರುಪಾವತಿಸುವ ಮಾರ್ಗಸೂಚಿಗಳನ್ನು ಹೇಳಿಕೊಡಬೇಕು ಎಂದರು.
ಮಹಿಳೆಯರು ಬ್ಯಾಂಕಿನ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಜ್ಞಾನವನ್ನು ಪಡೆದರೆ ಪ್ರತಿ ಕುಟುಂಬಕ್ಕೂ ಅನುಕೂಲವಾಗಲಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6,198 ಸಂಘಗಳಿದ್ದು, ಅವುಗಳಿಗೆ ವಿವಿಧ ಇಲಾಖೆಗಳಡಿ ಸಿಗುವ ಸೌಲತ್ತುಗಳನ್ನು ಒಗ್ಗೂಡಿಸುವ ಮೂಲಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಕ್ಕೂಟಗಳನ್ನು ರಚನೆ ಮಾಡಿ ಸಾಂಸ್ಥಿಕ ಬಲವರ್ಧನೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಹೊಸ ಸಂಘಗಳ ಬ್ಯಾಂಕ್ ಖಾತೆಗಳನ್ನು ತೆರೆಯುವುದರ ಕುರಿತು ಹಾಗೂ ಬ್ಯಾಂಕ್ ಸಾಲ ವಿತರಿಸುವ ಕುರಿತು ಜಿಲ್ಲೆಯ ಪ್ರಗತಿಯನ್ನು ಆದ್ಯತೆಯ ಮೇರೆಗೆ ಎಲ್ಲ ಸಂಘಗಳಿಗೆ ಬ್ಯಾಂಕ್ ಸಾಲ ವಿತರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನವಲ್ ಕಿಶೋರ್ ಸಿಂಗ್, ಬ್ಯಾಂಕ್ ವ್ಯವಸ್ಥಾಪಕರು, ಶಾಖೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಜಿಲ್ಲಾ ವ್ಯವಸ್ಥಾಪಕರು, ತಾಲೂಕು ಮಟ್ಟದ ಸಿಬ್ಬಂದಿಗಳು, ಲೀಡ್ ಬ್ಯಾಂಕಿನ ಸಿಬ್ಬಂದಿ, ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande