
ಹುಬ್ಬಳ್ಳಿ, 25 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಯುವಕನೋರ್ವನನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಕೊಲೆ ಮಾಡಿ, ಶವವನ್ನು ಚೀಲದಲ್ಲಿ ತುಂಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸೆದು ಹೋಗಿರುವ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗದಗ ರಸ್ತೆಯಲ್ಲಿರುವ ಐಟಿಸಿ ಗೋಡೌನ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಬಂಡಿವಾಡ ಮೂಲದ ಮಂಜುನಾಥ (29) ಎಂದು ಗುರುತಿಸಲಾಗಿದೆ.
ಹಂತಕರು ಯುವಕನನ್ನು ಬೇರೆಡೆ ಕೊಲೆ ಮಾಡಿ, ಕುರುಹು ಸಿಗದಂತೆ ಶವವನ್ನು ಚೀಲದಲ್ಲಿ ಹಾಕಿ ಕಟ್ಟಿ ಹೆದ್ದಾರಿಯ ಮೇಲೆ ಎಸೆದು ಪರಾರಿಯಾಗಿದ್ದಾರೆ. ಇಂದು ಮುಂಜಾನೆ ರಸ್ತೆಯಲ್ಲಿ ಹೋಗುತ್ತಿದ್ದವರು ಚೀಲವನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಭಯಾನಕ ಕೃತ್ಯ ಬಯಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಕೊಲೆಗೆ ನಿಖರ ಕಾರಣವೇನು, ಹಂತಕರು ಯಾರು, ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಹಳೇ ದ್ವೇಷ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಈ ಕೊಲೆ ನಡೆದಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa