
ನವದೆಹಲಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೆಹಲಿ ಭಾರತ್ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ–2026ರ ವೇಳೆ ನಡೆದ ಪ್ರತಿಭಟನೆ ಪ್ರಕರಣದಲ್ಲಿ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಚಿಬ್ ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದ್ದು, ಚಿಬ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ.
ದೆಹಲಿ ಪೊಲೀಸರ ಮಾಹಿತಿ ಪ್ರಕಾರ, ಚಿಬ್ ಅವರನ್ನು ಒಂದು ದಿನ ಮೊದಲು ತಿಲಕ್ ಮಾರ್ಗ ಪೋಲಿಸ್ ಠಾಣೆಗೆ
ವಿಚಾರಣೆಗಾಗಿ ಕರೆಯಲಾಗಿತ್ತು. ವಿಚಾರಣೆಯ ವೇಳೆ ಲಭ್ಯವಾದ ಮಾಹಿತಿಗಳು ಮತ್ತು ಪುರಾವೆಗಳ ಆಧಾರದ ಮೇಲೆ ಅವರ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಕಂಡುಬಂದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಗ್ವಾಲಿಯರ್ನಿಂದ ಜಿತೇಂದ್ರ ಯಾದವ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖಾ ಸಂಸ್ಥೆಗಳು ಈ ಘಟನೆಯನ್ನು ಪಿತೂರಿ ಕೋನದಿಂದ ಪರಿಶೀಲಿಸುತ್ತಿದ್ದು, ಪ್ರತಿಭಟನೆಯ ಪೂರ್ವಯೋಜನೆ, ಭಾಗವಹಿಸಿದವರ ಪಾತ್ರ ಮತ್ತು ಸಂಘಟನಾ ಸಿದ್ಧತೆಗಳ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಎಲೆಕ್ಟ್ರಾನಿಕ್ ಪುರಾವೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಇದರೊಟ್ಟಿಗೆ, ದೆಹಲಿಯ ಪಟಿಯಾಲ ಹೌಸ ನ್ಯಾಯಾಲಯ ಈ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರ ಅಪರಾಧ ವಿಭಾಗದ ಅಂತರರಾಜ್ಯ ಕೋಶಕ್ಕೆ ವಹಿಸಿದೆ. ದೇಶದ ವಿವಿಧ ಭಾಗಗಳಿಂದ ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ಇರುವುದರಿಂದ ಅಂತರರಾಜ್ಯ ಮಟ್ಟದಲ್ಲಿ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa