
ನವದೆಹಲಿ, 09 ನವೆಂಬರ್ (ಹಿ.ಸ.):
ಭಾರತ ಮತ್ತು ಲೆಬನಾನ್ ನಡುವೆ ಸೋಮವಾರ ನವದೆಹಲಿಯಲ್ಲಿ ಮೊದಲ ವಿದೇಶಾಂಗ ಕಚೇರಿ ಸಮಾಲೋಚನೆ ನಡೆಯಿತು. ಈ ಸಂದರ್ಭದಲ್ಲಿ ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಿ, ರಾಜಕೀಯ, ಭದ್ರತೆ, ಆರ್ಥಿಕ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದವು.
ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಹಾಗೂ ಔಷಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಆದ್ಯತೆ ನೀಡಲು ಎರಡೂ ದೇಶಗಳು ಒಪ್ಪಿಕೊಂಡವು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಕಾನ್ಸುಲರ್, ಪಾಸ್ಪೋರ್ಟ್ ಮತ್ತು ವಿದೇಶದಲ್ಲಿರುವ ಭಾರತೀಯ ವ್ಯವಹಾರಗಳು) ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ಹಾಗೂ ಲೆಬನಾನ್ನ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ರಾಯಭಾರಿ ಅಬ್ದೆಲ್ ಸತ್ತಾರ್ ಇಸ್ಸಾ ಅವರು ಸಮಾಲೋಚನೆಯ ಸಹಅಧ್ಯಕ್ಷತೆ ವಹಿಸಿದ್ದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಸಭೆಯಲ್ಲಿ ಭಾರತ ಮತ್ತು ಲೆಬನಾನ್ ನಡುವಿನ ರಾಜಕೀಯ ಹಾಗೂ ಭದ್ರತಾ ಸಹಕಾರ, ಆರ್ಥಿಕ ಸಂಬಂಧಗಳು ಮತ್ತು ಸಾಮಾಜಿಕ-ಸಾಂಸ್ಕೃತಿಕ ವಿನಿಮಯದ ವಿವಿಧ ಆಯಾಮಗಳನ್ನು ಪರಿಶೀಲಿಸಲಾಯಿತು. ಅಲ್ಲದೆ, ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಉಭಯ ದೇಶಗಳ ಪ್ರತಿನಿಧಿಗಳು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಮೊದಲ ವಿದೇಶಾಂಗ ಕಚೇರಿ ಸಮಾಲೋಚನೆಯ ಮೂಲಕ ಭಾರತ ಮತ್ತು ಲೆಬನಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಹೊಸ ಅವಕಾಶಗಳನ್ನು ರೂಪಿಸಲು ಉಭಯ ದೇಶಗಳು ಒತ್ತು ನೀಡಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.