
ನವದೆಹಲಿ, 09 ನವೆಂಬರ್ (ಹಿ.ಸ.):
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತ ಸೇರಿದಂತೆ ವಿವಿಧ ಕಾರಣಗಳಿಂದ ಸುಟ್ಟ ಗಾಯಗಳಾದ ಒಟ್ಟು 42 ಪ್ರಕರಣಗಳು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆಸ್ಪತ್ರೆಯಲ್ಲಿ ದಾಖಲಾಗಿವೆ. ಈ ಪೈಕಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 31 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡವರಲ್ಲಿ ನಾಲ್ವರು ತೀವ್ರ ನಿಗಾ ಘಟಕದಲ್ಲಿ ಹಾಗೂ ಏಳು ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಐವರು ಗಾಯಾಳುಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಏಮ್ಸ್‌ನ ಪ್ಲಾಸ್ಟಿಕ್, ಪುನರ್ನಿರ್ಮಾಣ ಮತ್ತು ಸುಟ್ಟ ಗಾಯಗಳ ಶಸ್ತ್ರಚಿಕಿತ್ಸಾ ವಿಭಾಗ ಸೋಮವಾರ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಸೋಮವಾರ ಬೆಳಗ್ಗೆ 11 ಗಂಟೆಯವರೆಗಿನ ಅಂಕಿಅಂಶ ಇದಾಗಿದೆ. ಒಟ್ಟು 42 ಪ್ರಕರಣಗಳ ಪೈಕಿ 37 ಮಂದಿ ಪಟಾಕಿಗಳಿಂದ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಇಬ್ಬರು ಪೊಟ್ಯಾಷ್‌ನಿಂದ ಗಾಯಗೊಂಡಿದ್ದಾರೆ. ಪೊಟ್ಯಾಷ್‌ನಿಂದ ಗಾಯಗೊಂಡವರಲ್ಲಿ 13 ವರ್ಷದ ಬಾಲಕನೂ ಸೇರಿದ್ದಾನೆ.
ಪ್ರಸ್ತುತ ಎಂಟು ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳ ಪೈಕಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಮಕ್ಕಳು ಸೇರಿದ್ದಾರೆ. ಇವರಲ್ಲಿ ಅತ್ಯಂತ ಕಿರಿಯ ಮಗುವಿಗೆ ಐದು ವರ್ಷ. ಎಂಟು ವರ್ಷದ ಮತ್ತೊಬ್ಬ ಬಾಲಕನ ದೇಹದ ಶೇ.45ರಷ್ಟು ಭಾಗ ಸುಟ್ಟಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
10ರಿಂದ 18 ವರ್ಷದೊಳಗಿನ 12 ಮಂದಿ ಹಾಗೂ 18ರಿಂದ 60 ವರ್ಷದೊಳಗಿನ 22 ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. 60 ವರ್ಷ ಮೇಲ್ಪಟ್ಟ ಒಬ್ಬರೂ ಗಾಯಾಳುಗಳಲ್ಲಿ ಸೇರಿದ್ದಾರೆ.
ಇದಲ್ಲದೆ, ಕಣ್ಣಿಗೆ ಗಾಯಗಳಾದ ಕೆಲವು ಮಂದಿ ನೇರವಾಗಿ ಏಮ್ಸ್‌ನ ಆರ್‌ಪಿ ಕೇಂದ್ರದ ನೇತ್ರ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿರುವ ಸಾಧ್ಯತೆಯಿದೆ. ಅಂತಹ ಪ್ರಕರಣಗಳನ್ನು ಈ ಅಂಕಿಅಂಶಗಳಲ್ಲಿ ಸೇರಿಸಲಾಗಿಲ್ಲ ಎಂದು ಏಮ್ಸ್ ಸ್ಪಷ್ಟಪಡಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.