ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವವರಿಗೆ ಬೆಂಗಳೂರಿನಿಂದ ವಿಶೇಷ ರೈಲು ಸಂಚಾರ
ದೀಪಾವಳಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯಿಂದ ಬೆಂಗಳೂರು–ಬೆಳಗಾವಿ ನಡುವೆ ನವೆಂಬರ್ 7ರಿಂದ 10ರವರೆಗೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಘೋಷಣೆ. ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿದೆ.
diwali-special-train-between-bengaluru-and-belagavi-from-november-7-to-10


ಬೆಂಗಳೂರು, 06 ನವೆಂಬರ್ (ಹಿ.ಸ.):

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ತೆರಳುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ.

ಹಬ್ಬದ ಸಂದರ್ಭದಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆ ಅಧಿಕಾರಿಗಳು, ನವೆಂಬರ್ 7ರಿಂದ 10ರವರೆಗೆ ಎರಡೂ ಮಾರ್ಗಗಳಲ್ಲಿ ತಲಾ ಎರಡು ಟ್ರಿಪ್ಗಳಂತೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಹೇಳಿದ್ದಾರೆ.

ಬೆಂಗಳೂರು–ಬೆಳಗಾವಿ ನಡುವೆ ಸಂಚರಿಸುವ 06551 ಸಂಖ್ಯೆಯ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 7 ಮತ್ತು 9ರಂದು ರಾತ್ರಿ 7 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.

ಅದೇ ರೀತಿ, ಬೆಳಗಾವಿ–ಬೆಂಗಳೂರು ನಡುವೆ ಸಂಚರಿಸುವ 06552 ಸಂಖ್ಯೆಯ ವಿಶೇಷ ರೈಲು ನವೆಂಬರ್ 8 ಮತ್ತು 10ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 5 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ

20 ಬೋಗಿಗಳನ್ನು ಹೊಂದಿರುವ ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಹಾಗೂ ಸಾಮಾನ್ಯ ರೈಲುಗಳಲ್ಲಿ ಉಂಟಾಗುವ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ.

ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರೈಲು ವೇಳಾಪಟ್ಟಿಯ ವಿವರಗಳನ್ನು ರೈಲ್ವೆಯ ಅಧಿಕೃತ ವ್ಯವಸ್ಥೆಯಲ್ಲಿ ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande