
ಬಳ್ಳಾರಿ, 06 ನವೆಂಬರ್ (ಹಿ.ಸ.):
ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ.
1991ರಿಂದ 2025ರವರೆಗೆ ದಾಖಲಾಗಿ ಪಾವತಿಗೆ ಬಾಕಿ ಉಳಿದಿರುವ ಅರ್ಹ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇ-ಚಲನ್ ಹಾಗೂ ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಈ ವಿಶೇಷ ಸೌಲಭ್ಯ ನವೆಂಬರ್ 21ರಿಂದ ಡಿಸೆಂಬರ್ 11ರವರೆಗೆ ಮಾತ್ರ ಜಾರಿಯಲ್ಲಿರಲಿದ್ದು, ವಾಹನ ಸವಾರರು ನಿಗದಿತ ಅವಧಿಯೊಳಗೆ ದಂಡ ಪಾವತಿಸಿ ಪ್ರಯೋಜನ ಪಡೆಯಬಹುದಾಗಿದೆ.
ಸಾರ್ವಜನಿಕರು ನ್ಯಾಯಾಲಯ ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ದಂಡ ಪಾವತಿಗೆ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕರ್ನಾಟಕ ಒನ್ ಕೇಂದ್ರಗಳು, ಸಂಚಾರಿ ಪೊಲೀಸ್ ಠಾಣೆಗಳು, ಅಧಿಕೃತ ಪರಿವಾಹನ್ ಜಾಲತಾಣ, ಕೆಎಸ್ಪಿ ಆ್ಯಪ್ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ದಂಡ ಪಾವತಿಸಬಹುದು.
ರಾಜ್ಯಾದ್ಯಂತ ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯಗಳಲ್ಲಿ ಲಕ್ಷಾಂತರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಸರ್ಕಾರ ಈ ಅವಕಾಶ ಕಲ್ಪಿಸಿದೆ.
ವಾಹನ ಸವಾರರು ಕಾನೂನು ಸಂಕಷ್ಟಗಳಿಂದ ಮುಕ್ತಿ ಪಡೆಯಲು ಯಾವುದೇ ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ತಾಲ್ಲೂಕು ಕಾನೂನು ಸೇವಾ ಸಮಿತಿ, ಸಂಚಾರಿ ಪೊಲೀಸ್ ಠಾಣೆ ಅಥವಾ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್