
ಬಾಗಲಕೋಟೆ, 06 ನವೆಂಬರ್ (ಹಿ.ಸ.)
ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಆರೋಗ್ಯಕರ ಆಹಾರ ಒದಗಿಸುವ ಉದ್ದೇಶದಿಂದ ಮುಧೋಳ ನಗರ ವ್ಯಾಪ್ತಿಯ ವಿವಿಧ ಹೋಟೆಲ್ಗಳು ಮತ್ತು ಬೇಕರಿಗಳಿಗೆ ತಾಲೂಕು ಆಡಳಿತದ ಅಧಿಕಾರಿಗಳು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಧೋಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ ಪ್ರಕಾಶ ಗಾಯಕವಾಡ ಮತ್ತು ತಾಲೂಕು ಆರೋಗ್ಯಾಧಿಕಾರಿ ಅವರು ಜಂಟಿಯಾಗಿ ನಗರದ ಶಬರಿಶಾಗರ, ವಿನಾಯಕ ಹೋಟೆಲ್ ಸೇರಿದಂತೆ ಬಸ್ ನಿಲ್ದಾಣದ ಒಳಭಾಗದಲ್ಲಿರುವ ವಿವಿಧ ಹೋಟೆಲ್ಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹೋಟೆಲ್ಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಆಹಾರ ತಯಾರಿಕೆಗೆ ಬಳಸುವ ಕಚ್ಚಾ ಸಾಮಗ್ರಿಗಳು, ಅಡುಗೆಗೆ ಉಪಯೋಗಿಸುವ ಪದಾರ್ಥಗಳ ಗುಣಮಟ್ಟ ಹಾಗೂ ಆಹಾರ ಸಂಗ್ರಹಣೆಯ ವಿಧಾನವನ್ನು ಪರಿಶೀಲಿಸಿದರು. ಅಲ್ಲದೆ, ಹೋಟೆಲ್ಗಳ ಅಡುಗೆ ಮನೆ, ಆಹಾರ ತಯಾರಿಸುವ ಸ್ಥಳ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಿದರು.
ನಂತರ ಮಹಾರಾಣಿ ಬೇಕರಿ ಸೇರಿದಂತೆ ನಗರದ ವಿವಿಧ ಬೇಕರಿಗಳಿಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು, ಬೇಕರಿ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿರುವ ಪದಾರ್ಥಗಳು, ಆಹಾರ ಬಣ್ಣಗಳು ಹಾಗೂ ಇತರೆ ಸಾಮಗ್ರಿಗಳ ಗುಣಮಟ್ಟದ ಕುರಿತು ಸಮಗ್ರ ಪರಿಶೀಲನೆ ನಡೆಸಿದರು. ಆಹಾರ ಪದಾರ್ಥಗಳನ್ನು ತಯಾರಿಸುವಾಗ ನಿಗದಿತ ಗುಣಮಟ್ಟ ಮತ್ತು ಸ್ವಚ್ಛತಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಬಳಕೆಗೆ ಎಚ್ಚರಿಕೆ
ಗ್ರಾಹಕರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಹೋಟೆಲ್ ಮತ್ತು ಬೇಕರಿ ಮಾಲೀಕರು ಆಹಾರ ತಯಾರಿಸುವಾಗ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಮಾತ್ರ ಬಳಸಬೇಕು. ಆಹಾರ ಪದಾರ್ಥಗಳ ತಯಾರಿಕೆ ಮತ್ತು ಸಂಗ್ರಹಣೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಹಕರ ದೇಹ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗುವ ಯಾವುದೇ ಪದಾರ್ಥ, ಕಳಪೆ ಗುಣಮಟ್ಟದ ಸಾಮಗ್ರಿ ಅಥವಾ ಅನುಮತಿಯಿಲ್ಲದ ಬಣ್ಣಗಳನ್ನು ಬಳಸಬಾರದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ನಗರದ ಹೋಟೆಲ್ ಹಾಗೂ ಬೇಕರಿಗಳಲ್ಲಿ ಸಾರ್ವಜನಿಕರಿಗೆ ಸುರಕ್ಷಿತ, ಸ್ವಚ್ಛ ಮತ್ತು ಗುಣಮಟ್ಟದ ಆಹಾರ ದೊರೆಯುವಂತೆ ವ್ಯಾಪಾರಸ್ಥರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳನ್ನು ಉಲ್ಲಂಘಿಸದೆ ವ್ಯಾಪಾರ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಪರಿಶೀಲನಾ ಕಾರ್ಯಗಳು ಮುಂದುವರಿಯಲಿದ್ದು, ಹೋಟೆಲ್ ಹಾಗೂ ಬೇಕರಿ ಮಾಲೀಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande