ಹಿರಿಯ ಸಾಹಿತಿ ಪ್ರೊ. ಕೆ.ವಿ. ನಾರಾಯಣ ನಿಧನ
ಬೆಂಗಳೂರು, 06 ನವೆಂಬರ್ (ಹಿ.ಸ.): ಕನ್ನಡದ ಖ್ಯಾತ ಚಿಂತಕ, ಭಾಷಾವಿಜ್ಞಾನಿ ಹಾಗೂ ಹಿರಿಯ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ (79) ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದ ಅವರಿಗೆ ಗುರುವಾರ ತಡರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪ
ಹಿರಿಯ ಸಾಹಿತಿ ಪ್ರೊ. ಕೆ.ವಿ. ನಾರಾಯಣ ಫೈಲ್ ಪೋಟೋ


ಬೆಂಗಳೂರು, 06 ನವೆಂಬರ್ (ಹಿ.ಸ.):

ಕನ್ನಡದ ಖ್ಯಾತ ಚಿಂತಕ, ಭಾಷಾವಿಜ್ಞಾನಿ ಹಾಗೂ ಹಿರಿಯ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ (79) ಅವರು ನಿಧನರಾಗಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದ ಅವರಿಗೆ ಗುರುವಾರ ತಡರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಎಚ್.ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ 1948ರಲ್ಲಿ ಜನಿಸಿದ ಕೆ.ವಿ. ನಾರಾಯಣ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿದ್ದರು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಭಾಷಾವಿಜ್ಞಾನ ಮತ್ತು ಸಾಹಿತ್ಯ ಮೀಮಾಂಸೆಯ ಪ್ರಾಧ್ಯಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ಡೀನ್, ಕುಲಸಚಿವ ಹಾಗೂ ಪ್ರಭಾರ ಕುಲಪತಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕನ್ನಡ ಭಾಷಾ ಚಿಂತನೆಗೆ ಆಧುನಿಕ ಹಾಗೂ ವೈಜ್ಞಾನಿಕ ಆಯಾಮ ನೀಡಿದ ಪ್ರಮುಖ ವಿದ್ವಾಂಸರಾಗಿದ್ದರು. ಕನ್ನಡವನ್ನು ಕೇವಲ ಸಾಹಿತ್ಯದ ಭಾಷೆಯಾಗಿ ಸೀಮಿತಗೊಳಿಸದೆ, ಜ್ಞಾನಶಿಸ್ತಿನ ಭಾಷೆಯಾಗಿ ಬೆಳೆಸುವ ಉದ್ದೇಶದಿಂದ ಅವರು ರೂಪಿಸಿದ 'ಕರ್ನಾಟಕ ಓದು' ಕಾರ್ಯಾಗಾರ ಸರಣಿ ಸಂಶೋಧನಾ ವಲಯದಲ್ಲಿ ಗಮನ ಸೆಳೆದಿತ್ತು.

ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಸಂದಿದ್ದವು.

ಪ್ರೊ. ಕೆ.ವಿ. ನಾರಾಯಣ ಅವರ ನಿಧನದಿಂದ ಕನ್ನಡ ಸಾಹಿತ್ಯ, ಭಾಷಾವಿಜ್ಞಾನ ಮತ್ತು ಶೈಕ್ಷಣಿಕ ಕ್ಷೇತ್ರದ ಪ್ರಮುಖ ವಿದ್ವಾಂಸರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಅವರ ಅಗಲಿಕೆಗೆ ಸಾಹಿತಿಗಳು, ಸಂಶೋಧಕರು ಹಾಗೂ ಅಪಾರ ಸಂಖ್ಯೆಯ ಶಿಷ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande