ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಕಾಂಗ್ರೆಸ್-ಜೆಡಿಎಸ್ ಜಟಾಪಟಿ: ಗಣಿಗ ರವಿಕುಮಾರ್ ತಿರುಗೇಟು
ಮಂಡ್ಯದಲ್ಲಿ ಎಆರ್ಎಐ ಕೈಗಾರಿಕಾ ಘಟಕ ಸ್ಥಾಪನೆಗೆ ಭೂಮಿ ಗುರುತಿಸುವ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಕ್ಸಮರ ತೀವ್ರಗೊಂಡಿದೆ. ಜೆಡಿಎಸ್ ರೈತರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸುತ್ತಿದೆ ಎಂದು ಶಾಸಕ ಗಣಿಗ ರವಿಕುಮಾರ್ ಆರೋಪಿಸಿದ್ದಾರೆ.
Mandya-ARAI-Industrial-Project-Congress-JDS-Political-War-Ganiga-Ravikumar


ಮಂಡ್ಯ, 06 ನವೆಂಬರ್ (ಹಿ.ಸ.):

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.

ಎಆರ್ಎಐ ಘಟಕ ಸ್ಥಾಪನೆಗೆ ಭೂಮಿ ಗುರುತಿಸುವ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರ ಹೇಳಿಕೆಗಳಿಗೆ ಶಾಸಕ ಗಣಿಗ ರವಿಕುಮಾರ್ ತಿರುಗೇಟು ನೀಡಿದ್ದಾರೆ. ಜೆಡಿಎಸ್ ರೈತರನ್ನು ಎತ್ತಿಕಟ್ಟಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮಂಡ್ಯ ತಾಲ್ಲೂಕಿನ ಬಸಾರಾಳು ಸಮೀಪದ ಮುದ್ದನಘಟ್ಟ ಮತ್ತು ಹೆಗ್ಗಡತಹಳ್ಳಿ ಬಳಿ ಎಆರ್ಎಐ ಘಟಕ ಸ್ಥಾಪನೆಗಾಗಿ ಜಿಲ್ಲಾಡಳಿತ 100 ಎಕರೆ ಭೂಮಿಯನ್ನು ಗುರುತಿಸಿದೆ.

ಈ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಹಸ್ತಾಂತರಿಸುವ ಸಂಬಂಧ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.

ಮತ್ತೊಂದೆಡೆ, ಘಟಕ ಸ್ಥಾಪನೆಗೆ ಅಗತ್ಯ ಭೂಮಿ ಒದಗಿಸುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಇದೇ ವಿಚಾರವಾಗಿ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ತಮ್ಮ ಕೃಷಿ ಭೂಮಿಯನ್ನು ಪರಿಹಾರ ಪಡೆಯದೆ ನೀಡಲು ಸಿದ್ಧ ಎಂದು ಹೇಳಿದ್ದು, ರೈತರ ಒಪ್ಪಿಗೆ ಪಡೆದು, ಸೂಕ್ತ ಪರಿಹಾರ, ಜೀವನ ಭದ್ರತೆ ಹಾಗೂ ಉದ್ಯೋಗಾವಕಾಶ ಕಲ್ಪಿಸಿದ ಬಳಿಕ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೃಷಿ ಭೂಮಿಯನ್ನು ಗೋಮಾಳ ಎಂದು ಪರಿಗಣಿಸಬಾರದು. ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶ ಅರಿತ ಬಳಿಕವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಶಾಸಕ ಗಣಿಗ ರವಿಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿ ಎರಡೂವರೆ ವರ್ಷ ಕಳೆದಿದೆ. ಮಂಡ್ಯಕ್ಕೆ ಕೈಗಾರಿಕೆ ಬರಬೇಕು ಎಂಬುದು ಎಲ್ಲರ ಆಶಯ.

ಈ ಹಿಂದೆ ಅಮೆರಿಕದ ಕಂಪನಿ ಸ್ಥಾಪನೆ ವಿಚಾರ ಚರ್ಚೆಯಾಗಿ ಅಲ್ಲಿಗೇ ನಿಂತುಹೋಯಿತು. ಮೈಸೂರು ಸಕ್ಕರೆ ಕಾರ್ಖಾನೆಯ ಶಾಲೆಗೆ 25 ಕೋಟಿ ರೂ. ನೀಡುವುದಾಗಿ ಹೇಳಿ ಕೇವಲ 25 ಲಕ್ಷ ರೂ. ನೀಡಲಾಗಿದೆ ಎಂದು ಟೀಕಿಸಿದರು.

ಎಆರ್ಎಐ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಈಗಾಗಲೇ 100 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ನೀಡಲಾಗಿದೆ. ಎಆರ್ಎಐ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಭೆಯಲ್ಲಿ 100 ಎಕರೆ ಬದಲಿಗೆ 500 ಎಕರೆ ಜಾಗ ಬೇಕು ಎಂದು ಕೇಳಿದಾಗ, ತಮ್ಮ ಕ್ಷೇತ್ರದಲ್ಲಿ ಅಷ್ಟು ಜಾಗ ಲಭ್ಯವಿಲ್ಲ ಎಂದು ತಿಳಿಸಿದ್ದೇನೆ.

ಮುದ್ದನಘಟ್ಟದಲ್ಲಿ ಒಟ್ಟು 153 ಎಕರೆ ಗೋಮಾಳವಿದ್ದು, ಅದರಲ್ಲಿ ಈಗಾಗಲೇ 76 ಎಕರೆ ರೈತರಿಗೆ ಮಂಜೂರಾಗಿದೆ. ಉಳಿದ 77 ಎಕರೆ ಜಾಗ ಲಭ್ಯವಿದೆ. ಹೆಗ್ಗಡತಹಳ್ಳಿಯಲ್ಲಿಯೂ ಜಾಗವಿದೆ ಎಂದು ವಿವರಿಸಿದರು.

ಜೆಡಿಎಸ್ನಿಂದ ರೈತರನ್ನು ಎತ್ತಿಕಟ್ಟುವ ಪ್ರಯತ್ನ:

ಕೈಗಾರಿಕೆ ಸ್ಥಾಪನೆಗೆ ಅಗತ್ಯವಾದ 100 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ನೀಡಿರುವಾಗ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಗಣಿಗ ರವಿಕುಮಾರ್, ಕಾರ್ಖಾನೆ ಸ್ಥಾಪನೆಯಾಗದಂತೆ ತಡೆಯಲು ರೈತರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜೆಡಿಎಸ್ ವಿರುದ್ಧ ಆರೋಪಿಸಿದರು.

ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಎನ್. ಚಲುವರಾಯಸ್ವಾಮಿ ಸೇರಿದಂತೆ ಸ್ಥಳೀಯ ನಾಯಕರ ರಾಜಕೀಯ ಹೇಳಿಕೆಗಳಿಗಿಂತ ಎಆರ್ಎಐ ಅಧಿಕಾರಿಗಳು ಒಪ್ಪಿಕೊಂಡು ಯೋಜನೆ ರೂಪಿಸಿರುವುದಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುತಿಸಿರುವ ಸರ್ಕಾರಿ ಜಾಗವನ್ನು ಸಂಬಂಧಪಟ್ಟ ಪ್ರಕ್ರಿಯೆಯ ಮೂಲಕ ಕೆಇಡಿಬಿಗೆ ಹಸ್ತಾಂತರಿಸಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು. ಮಂಡ್ಯದಲ್ಲಿ ಕೈಗಾರಿಕೆ ಆರಂಭವಾದರೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಹೀಗಾಗಿ ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ಯೋಜನೆ ಸಾಕಾರಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಗಣಿಗ ರವಿಕುಮಾರ್ ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande