ಕೆ.ವಿ. ನಾರಾಯಣ ನಿಧನಕ್ಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸಂತಾಪ
ಬೆಂಗಳೂರು, 06 ನವೆಂಬರ್ (ಹಿ.ಸ.): ಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಹಾಗೂ ವಿಮರ್ಶಕ ಡಾ. ಕೆ.ವಿ. ನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದಶಕಗಳ ಕಾಲ ಕನ್ನಡವನ್ನೇ ಉಸಿರಾಡಿದ ಕೆ.ವಿ. ನಾರಾಯಣ
ಹಿರಿಯ ಸಾಹಿತಿ ಪ್ರೊ. ಕೆ.ವಿ. ನಾರಾಯಣ ಫೈಲ್ ಪೋಟೋ


ಬೆಂಗಳೂರು, 06 ನವೆಂಬರ್ (ಹಿ.ಸ.):

ಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಹಾಗೂ ವಿಮರ್ಶಕ ಡಾ. ಕೆ.ವಿ. ನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದಶಕಗಳ ಕಾಲ ಕನ್ನಡವನ್ನೇ ಉಸಿರಾಡಿದ ಕೆ.ವಿ. ನಾರಾಯಣ ಅವರು ಕನ್ನಡ ಭಾಷೆಯ ಉಳಿವು ಹಾಗೂ ಮುಂದಿನ ಪೀಳಿಗೆಗೆ ಕನ್ನಡವನ್ನು ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮರಿಸಿದ್ದಾರೆ.

ಅಕ್ಷರಗಳ ಮೂಲಕ ಕನ್ನಡ ಲೋಕವನ್ನು ಕಟ್ಟಿಕೊಟ್ಟ ಅವರು, ಅನೇಕ ಅನುವಾದಗಳ ಮೂಲಕ ಭಾಷೆಯ ಅಳಿವು-ಉಳಿವಿನ ಕುರಿತು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದರು. ತಮ್ಮ ವಿದ್ವತ್ತಿನ ಮೂಲಕ ಅಪರೂಪದ ವೈಚಾರಿಕ ಒಳನೋಟಗಳನ್ನು ನೀಡಿದ್ದರು. ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಏಳಿಗೆಗೆ ಹಲವು ಸಲಹೆ, ಸೂಚನೆಗಳನ್ನು ನೀಡುವುದರೊಂದಿಗೆ ವಿಶಿಷ್ಟ ಆಲೋಚನಾ ಪರಂಪರೆಯನ್ನು ಬೆಳೆಸಿದವರಲ್ಲಿ ಪ್ರಮುಖರಾಗಿದ್ದರು ಎಂದು ತಿಳಿಸಿದ್ದಾರೆ.

ಕರ್ನಾಟಕ ಏಕೀಕರಣದ ನೆನಪಿನ ನವೆಂಬರ್ ತಿಂಗಳಿನಲ್ಲೇ ಇಂತಹ ಹಿರಿಯ ಸಾಹಿತಿಯನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಪಾರ ಶಿಷ್ಯವರ್ಗ, ಸಾಹಿತ್ಯಾಸಕ್ತರು ಹಾಗೂ ಕುಟುಂಬದವರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ, ಕನ್ನಡದ ಹಿರಿಯ ಭಾಷಾ ವಿದ್ವಾಂಸ, ಸಾಹಿತಿ ಹಾಗೂ ಚಿಂತಕ ಡಾ. ಕೆ.ವಿ. ನಾರಾಯಣ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಧ್ಯಾಪಕರಾಗಿ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದಲ್ಲಿರುವ ಹೊಸ ತಲೆಮಾರಿನ ಸಾಹಿತ್ಯಾಸಕ್ತ ಯುವಜನರನ್ನು ಪ್ರೀತಿ ಮತ್ತು ಕಾಳಜಿಯಿಂದ ಜ್ಞಾನಜಗತ್ತಿಗೆ ಕೈಹಿಡಿದು ಮುನ್ನಡೆಸಿದವರು. ಅವರ ನಿಧನದ ದುಃಖದಲ್ಲಿ ತಾನೂ ಭಾಗಿಯಾಗಿದ್ದು, ಕೆ.ವಿ. ನಾರಾಯಣ ಅವರ ಪತ್ನಿ ಎಚ್.ಎಸ್. ಶ್ರೀಮತಿ ಹಾಗೂ ಕುಟುಂಬದವರಿಗೆ ಸಂತಾಪ ಸೂಚಿಸುವುದಾಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande