
ಬೆಂಗಳೂರು, 06 ನವೆಂಬರ್ (ಹಿ.ಸ.):
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಕಂಪನಿಗಳ ಮುಖ್ಯಸ್ಥರು ಹಾಗೂ ಮಾನವ ಸಂಪನ್ಮೂಲ (ಎಚ್ಆರ್) ವಿಭಾಗದ ಅಧಿಕಾರಿಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದ ನಿಯೋಗ ಸಭೆ ನಡೆಸಿದ್ದು, ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗ್ರಹಿಸಿದೆ.
ಕನ್ನಡ ರಾಜ್ಯೋತ್ಸವದ ದಿನ ಆರಂಭಿಸಲಾದ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡುವ ಅಭಿಯಾನದ ಭಾಗವಾಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಕರವೇ ನಿಯೋಗವು ವಿವಿಧ ಕಂಪನಿಗಳ ಸಿಇಒಗಳು ಹಾಗೂ ಎಚ್ಆರ್ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಕಂಪನಿಗಳಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಲಾಗಿದೆ ಎಂಬುದನ್ನು ಪರಿಶೀಲಿಸಲು ಉದ್ಯೋಗಿಗಳ ಮಾಹಿತಿಯನ್ನು ಒದಗಿಸುವಂತೆಯೂ ಮನವಿ ಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, “ನಾವು ಯಾವುದೇ ಉದ್ಯಮದ ವಿರೋಧಿಗಳಲ್ಲ. ಕರ್ನಾಟಕದಲ್ಲಿ ಉದ್ಯಮ ನಡೆಸುವ ಸಂಸ್ಥೆಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂಬುದು ನಮ್ಮ ಬೇಡಿಕೆ. ಇದು ಉದ್ಯಮಗಳ ನೈತಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಜವಾಬ್ದಾರಿಯೂ ಆಗಿದೆ” ಎಂದು ಹೇಳಿದರು.
ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸ್ಥಳೀಯ ರೈತರು ತಮ್ಮ ಅಮೂಲ್ಯ ಭೂಮಿಯನ್ನು ನೀಡಿದ್ದಾರೆ. ಕನ್ನಡಿಗರ ಭೂಮಿಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದಿಂದ ಸೃಷ್ಟಿಯಾಗುವ ಉದ್ಯೋಗಾವಕಾಶಗಳ ಪ್ರಯೋಜನ ಕನ್ನಡಿಗರಿಗೆ ಸಿಗಬಾರದೇ ಎಂದು ಅವರು ಪ್ರಶ್ನಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಕಂಪನಿಗಳ ಪ್ರತಿನಿಧಿಗಳು ಕನ್ನಡಿಗರ ಉದ್ಯೋಗ ಪ್ರಮಾಣವನ್ನು ಹೆಚ್ಚಿಸುವ ಭರವಸೆ ನೀಡಿದ್ದಾರೆ. ಮುಂದಿನ ಒಂದು ವರ್ಷದೊಳಗೆ ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರವೇ ತಿಳಿಸಿದೆ. ಅಲ್ಲದೆ, ಪ್ರಗತಿಯನ್ನು ಪರಿಶೀಲಿಸಲು ಮತ್ತೊಮ್ಮೆ ಸಭೆ ನಡೆಸುವಂತೆ ಕರವೇ ನಿಯೋಗಕ್ಕೆ ಆಹ್ವಾನ ನೀಡಿದ್ದಾರೆ.
ಸಭೆಯಲ್ಲಿ ಬಿಐಎಎಲ್, ಮೆನ್ಜೀಸ್ ಏವಿಯೇಷನ್, ಡಿಎಚ್ಎಲ್ ಎಕ್ಸ್ಪ್ರೆಸ್, ಶಾಪರ್ಸ್ ಸ್ಟಾಪ್, ಸ್ಟಾರ್ ಏರ್, ತಾಜ್ಸ್ಯಾಟ್ಸ್, ತಾಜ್ ಹೋಟೆಲ್ಸ್, ಎಚ್ಎಂಎಸ್, ಟಿಎಫ್ಎಸ್, ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್, ಡಬ್ಲ್ಯುಎಫ್ಎಸ್, ಏರ್ ಇಂಡಿಯಾ ಹಾಗೂ ಟಿಆರ್ಎಸ್ ಸೇರಿದಂತೆ 14 ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಬಿಐಎಎಲ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ನಳಿನಿ ಜಾರ್ಜ್, ಅಧಿಕಾರಿ ನಾಗರಾಜ್, ವಿವಿಧ ಕಂಪನಿಗಳ ಸಿಇಒಗಳು ಹಾಗೂ ಎಚ್ಆರ್ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ಕಂಪನಿಗಳಿಂದ ಸಂಗ್ರಹಿಸುವ ಉದ್ಯೋಗಿಗಳ ಮಾಹಿತಿಯನ್ನು ಕ್ರೋಢೀಕರಿಸಿ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಕರವೇ ತಿಳಿಸಿದೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯುವಂತೆ ಮುಂದಿನ ದಿನಗಳಲ್ಲಿಯೂ ಅಭಿಯಾನ ಮುಂದುವರಿಸುವುದಾಗಿ ಸಂಘಟನೆ ಹೇಳಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R