ಗ್ಯಾಸ್ ಕಟರ್ ಬಳಸಿ ಚಿನ್ನಾಭರಣ ಅಂಗಡಿ ದೋಚಿದ ಕಳ್ಳರು
ಬಾಗಲಕೋಟೆ, 06 ನವೆಂಬರ್ (ಹಿ.ಸ.) ಬಾಗಲಕೋಟೆ ನಗರದ ನವನಗರದ 26ನೇ ಸೆಕ್ಟರ್ನಲ್ಲಿರುವ ಓಂ ಜ್ಯುವೆಲ್ಲರ್ಸ್ ಅಂಗಡಿಯ ಬೀಗ ಮುರಿದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಈ ಘಟನೆಯಿಂದ ನವನಗರ ಸೇರಿದಂತೆ ನಗರದ ವ್ಯಾಪ
ಲೂಟಿ


ಬಾಗಲಕೋಟೆ, 06 ನವೆಂಬರ್ (ಹಿ.ಸ.)

ಬಾಗಲಕೋಟೆ ನಗರದ ನವನಗರದ 26ನೇ ಸೆಕ್ಟರ್ನಲ್ಲಿರುವ ಓಂ ಜ್ಯುವೆಲ್ಲರ್ಸ್ ಅಂಗಡಿಯ ಬೀಗ ಮುರಿದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಈ ಘಟನೆಯಿಂದ ನವನಗರ ಸೇರಿದಂತೆ ನಗರದ ವ್ಯಾಪಾರಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಶುಕ್ರವಾರ ಬೆಳಗಿನ ಜಾವ ಅಂಗಡಿಯನ್ನು ಗುರಿಯಾಗಿಸಿಕೊಂಡು ಬಂದಿರುವ ಕಳ್ಳರು, ಗ್ಯಾಸ್ ಕಟರ್ ಬಳಸಿ ಅಂಗಡಿಯ ಬೀಗವನ್ನು ಮುರಿದು ಒಳನುಗ್ಗಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಿನ ಜಾವ ನಡೆದಿರುವ ಈ ಕೃತ್ಯವು ಪೂರ್ವಯೋಜಿತವಾಗಿರುವ ಸಾಧ್ಯತೆಯಿದ್ದು, ಕಳ್ಳರು ಅಂಗಡಿಯ ಭದ್ರತಾ ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ ಕೃತ್ಯ ಎಸಗಿರಬಹುದೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನವನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ ಎಸ್ಪಿ ಸಿದ್ದಾರ್ಥ ಗೋಯೆಲ್ ಪರಿಶೀಲನೆ ನಡೆಸಿದರು. ಜೊತೆಗೆ ಬೆರಳಚ್ಚು ತಜ್ಞರ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಕಳ್ಳರು ಬಿಟ್ಟುಹೋಗಿರುವ ಸಾಧ್ಯತೆಯಿರುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.

ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಇತರೆ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸುವ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಅವರು, ಗ್ಯಾಸ್ ಕಟರ್ನಿಂದ ಅಂಗಡಿಯ ಬೀಗ ಮುರಿದು ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಸ್ಥಳಕ್ಕೆ ನವನಗರ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿರುವ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ. ಕಳವಾದ ಚಿನ್ನಾಭರಣಗಳ ನಿಖರ ಪ್ರಮಾಣ ಹಾಗೂ ಮೌಲ್ಯದ ಕುರಿತು ಹೆಚ್ಚಿನ ಮಾಹಿತಿ ತನಿಖೆಯ ನಂತರ ತಿಳಿದು ಬರಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande