
ಆನೇಕಲ್, 06 ನವೆಂಬರ್ (ಹಿ.ಸ.):
ಖಾಸಗಿ ಕಾರ್ಖಾನೆಯ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ತಮಿಳುನಾಡು ಗಡಿಭಾಗದ ಹೊಸೂರಿನ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಹೊಸೂರಿನ ಬಾಲಾಜಿ ಗೇರ್ಸ್ ಹೆಸರಿನ ಖಾಸಗಿ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕಾರ್ಮಿಕರು ಮೋಲ್ಡ್ಗೆ ಕಾಂಕ್ರೀಟ್ ಹಾಕುತ್ತಿದ್ದ ಸಂದರ್ಭದಲ್ಲಿ ಸೆಂಟ್ರಿಂಗ್ಗೆ ಅಳವಡಿಸಿದ್ದ ಮರದ ದಿಮ್ಮಿಗಳು ಏಕಾಏಕಿ ಕುಸಿದಿವೆ. ಪರಿಣಾಮ ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ.
ಈ ಘಟನೆಯಲ್ಲಿ ಕುಮರೇಶನ್ (39), ಮೈಕೆಲ್ (26) ಹಾಗೂ ಶ್ರೀನಿವಾಸನ್ (26) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರ ಮೃತದೇಹಗಳನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳ ನಿರ್ಲಕ್ಷ್ಯ?
ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕಾಂಕ್ರೀಟ್ನ ಭಾರವನ್ನು ತಡೆದುಕೊಳ್ಳಲು ಅಗತ್ಯವಾದ ಕಂಬಗಳ ವ್ಯವಸ್ಥೆ ಹಾಗೂ ಸೂಕ್ತ ತಾಂತ್ರಿಕ ಯೋಜನೆ ಇರಲಿಲ್ಲ ಎಂಬುದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಕಟ್ಟಡದ ವಿನ್ಯಾಸ ರೂಪಿಸಿದ ಎಂಜಿನಿಯರ್ ಸೇರಿದಂತೆ ಕಾಮಗಾರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊಸೂರು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದಿನೇಶ್ ಕುಮಾರ್, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು 17 ಮಂದಿ ಕಾರ್ಮಿಕರು ತೊಡಗಿಸಿಕೊಂಡಿದ್ದರು.
ಈ ವೇಳೆ ಮುಖ್ಯ ಪ್ರವೇಶ ದ್ವಾರ ಕುಸಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರು ಹೊಸೂರು, ತಿರುಪತ್ತೂರು ಹಾಗೂ ತಿರುವಣ್ಣಾಮಲೈ ಮೂಲದವರು ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದು, ಕಾಮಗಾರಿಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R