ಜಲಾಶಯದಲ್ಲಿ ನೀರಿದ್ದರೂ ಭತ್ತದ ಬೆಳೆಗೆ ನೀರು ಹರಿಸದ ಸರ್ಕಾರ: ಅಕ್ಕಿ ಬೆಲೆ ಏರಿಕೆಗೆ ಕಾಂಗ್ರೆಸ್ ಆಡಳಿತವೇ ಕಾರಣ:ಆರ್. ಅಶೋಕ್ ಟೀಕೆ
ಬೆಂಗಳೂರು, 06 ನವೆಂಬರ್ (ಹಿ.ಸ.): ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಭತ್ತದ ಬೆಳೆಗೆ ನೀರು ಹರಿಸದೆ ರೈತರ ಬೆಳೆ ನಾಶಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಾರುಕಟ್ಟೆಯಲ್ಲಿ ಅಕ್ಕಿಯ ಕೃತಕ ಅಭಾವ ಸೃಷ್ಟಿಯಾಗಿದೆ. ಇದರಿಂದ ದಿನನಿತ್ಯ ಬಳಸುವ ಅಕ್ಕಿಯ ಬೆಲೆಯೂ ಗಗನಕ್ಕೇರಿದೆ ಎಂದು
ಅಶೋಕ್ ಫೈಲ್ ಪೋಟೋ


ಬೆಂಗಳೂರು, 06 ನವೆಂಬರ್ (ಹಿ.ಸ.):

ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಭತ್ತದ ಬೆಳೆಗೆ ನೀರು ಹರಿಸದೆ ರೈತರ ಬೆಳೆ ನಾಶಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಾರುಕಟ್ಟೆಯಲ್ಲಿ ಅಕ್ಕಿಯ ಕೃತಕ ಅಭಾವ ಸೃಷ್ಟಿಯಾಗಿದೆ. ಇದರಿಂದ ದಿನನಿತ್ಯ ಬಳಸುವ ಅಕ್ಕಿಯ ಬೆಲೆಯೂ ಗಗನಕ್ಕೇರಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಅವರು, ಹಾಲು, ಮೊಸರು, ತುಪ್ಪ ಹಾಗೂ ಬಸ್ ಪ್ರಯಾಣ ದರ ಏರಿಕೆ ಮಾಡಿದ ಸರ್ಕಾರ ಇದೀಗ ಬಡ ಮತ್ತು ಮಧ್ಯಮ ವರ್ಗದ ಜನರು ಪ್ರತಿನಿತ್ಯ ಬಳಸುವ ಅಕ್ಕಿಯ ಬೆಲೆಯನ್ನೂ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ ಎಂದು ಟೀಕಿಸಿದ್ದಾರೆ.

ಮೂರು ತಿಂಗಳ ಹಿಂದೆ ಕೆ.ಜಿ.ಗೆ 40 ರೂ. ಇದ್ದ ಸೋನಾ ಮಸೂರಿ ಅಕ್ಕಿಯ ಬೆಲೆ ಈಗ 75 ರೂ.ಗೆ ತಲುಪಿದೆ. ಆರ್‌ಎನ್‌ಆರ್ ಅಕ್ಕಿ 80 ರೂ., ಎಚ್‌ಎಂಟಿ ಅಕ್ಕಿ 85 ರೂ. ಹಾಗೂ ಜೀರಾ ಅಕ್ಕಿ 96 ರೂ.ಗೆ ಏರಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅಕ್ಕಿಯ ಬೆಲೆ ಕೆ.ಜಿ.ಗೆ 150 ರೂ. ತಲುಪುವ ಆತಂಕ ಎದುರಾಗಲಿದೆ ಎಂದು ತಿಳಿಸಿದ್ದಾರೆ.

ಜಲಾಶಯದಲ್ಲಿ ನೀರಿದ್ದರೂ ಕಾಲುವೆಗಳಿಗೆ ನೀರು ಹರಿಸದೆ ರೈತರ ಬೆಳೆ ನಾಶವಾಗಲು ಅವಕಾಶ ಮಾಡಿಕೊಟ್ಟಿರುವುದು ಹಾಗೂ ಮಾರುಕಟ್ಟೆಯಲ್ಲಿ ಅಕ್ಕಿಯ ಅಭಾವ ಸೃಷ್ಟಿಯಾಗಲು ಕಾರಣವಾಗಿರುವುದು ಸರ್ಕಾರದ ಆಡಳಿತ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಉಚಿತ ಅಕ್ಕಿ ನೀಡುವುದಾಗಿ ಹೇಳಿಕೊಂಡರೂ, ಇದೀಗ ಜನಸಾಮಾನ್ಯರು ಪ್ರತಿನಿತ್ಯ ಸೇವಿಸುವ ಅಕ್ಕಿಯನ್ನೇ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಸರ್ಕಾರದ ಈ ದುರಾಡಳಿತದ ವಿರುದ್ಧ ರಾಜ್ಯದ ಜನತೆ ಆಕ್ರೋಶ ವ್ಯಕ್ತಪಡಿಸುವ ದಿನ ದೂರವಿಲ್ಲ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande