ಮಾಲೂರಿನಲ್ಲಿ ಪ್ರಜಾಸೇವಾ ಆಂದೋಲನ ; ಸಾರ್ವಜನಿಕರ ಕುಂದುಕೊರತೆ ಆಲಿಕೆಗೆ ಸಕಲ ಸಿದ್ಧತೆ
ಮಾಲೂರಿನಲ್ಲಿ 'ಪ್ರಜಾಸೇವಾ ಆಂದೋಲನ' ; ಸಾರ್ವಜನಿಕರ ಕುಂದುಕೊರತೆ ಆಲಿಕೆಗೆ ಸಕಲ ಸಿದ್ಧತೆ
ಮಾಲೂರಿನಲ್ಲಿ ಪ್ರಜಾಸೇವಾ ಆಂದೋಲನ ; ಸಾರ್ವಜನಿಕರ ಕುಂದುಕೊರತೆ ಆಲಿಕೆಗೆ ಸಕಲ ಸಿದ್ಧತೆ


ಕೋಲಾರ, 05 ನವೆಂಬರ್ (ಹಿ.ಸ.)

ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ನಿರ್ದೇಶನದಂತೆ ನವೆಂಬರ್ ೭ರ ಶನಿವಾರದಂದು ಮಾಲೂರು ನಗರದಲ್ಲಿ 'ಪ್ರಜಾಸೇವಾ ಆಂದೋಲನ' ಸಭೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೭:೦೦ ಗಂಟೆಗೆ ಮಾಲೂರಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ರಾಜ್ಯಾದ್ಯಂತ ನಡೆಯುತ್ತಿರುವ ಈ ಜನಪರ ಆಂದೋಲನದಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಸುತ್ತೋಲೆಯಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಇಲಾಖಾ ಮುಖ್ಯಸ್ಥರು ವೇದಿಕೆಯ ಮುಂಭಾಗದಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಲಿದ್ದು, ಸಾರ್ವಜನಿಕರು ಪ್ರಸ್ತಾಪಿಸುವ ಇಲಾಖಾವಾರು ವಿಷಯಗಳಿಗೆ ತಮ್ಮ ಆಸನಗಳಿಂದಲೇ ಮೈಕ್ರೋಫೋನ್ ಮೂಲಕ ಉತ್ತರಿಸಿ ವಿವರಣೆ ನೀಡಲಿದ್ದಾರೆ.

ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಇಲಾಖಾವಾರು ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ವೇದಿಕೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ನಗರಾಭಿವೃದ್ಧಿ ಕೋಶ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಮಾಲೂರು ನಗರಸಭೆಯು ಸ್ವಚ್ಛತೆ, ಸೊಳ್ಳೆ ನಿಯಂತ್ರಣ ಔಷಧ ಸಿಂಪಡಣೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಹೊಣೆ ಹೊತ್ತಿವೆ. ಆರೋಗ್ಯ ತುರ್ತು ಸೇವೆಗಾಗಿ ಸ್ಥಳದಲ್ಲೇ ವೈದ್ಯರ ತಂಡ ಮತ್ತು ಆಂಬ್ಯುಲೆನ್ಸ್ ನಿಯೋಜಿಸಲಾಗಿದ್ದು, ಸಾರ್ವಜನಿಕರ ಸೌಲಭ್ಯಕ್ಕಾಗಿ ವಿವಿಧ ಇಲಾಖೆಗಳ ಮಾಹಿತಿ ಸ್ಟಾಲ್ಗಳನ್ನು ತೆರೆಯಲಾಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದ0ತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಇಲಾಖೆ ಹಾಗೂ ಅಗ್ನಿ ಅವಘಡಗಳ ನಿಯಂತ್ರಣಕ್ಕಾಗಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ.

ಕಾರ್ಯಕ್ರಮದ ಸ್ಥಳದಲ್ಲಿ ಸಾರ್ವಜನಿಕರಿಂದ ನೇರವಾಗಿ ಅರ್ಜಿ ಸ್ವೀಕರಿಸಲು ಮತ್ತು ಆನ್ಲೈನ್ನಲ್ಲಿ ನೋಂದಣಿ ಮಾಡಲು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ, ನಗರಸಭೆ ಪೌರಾಯುಕ್ತರು ಹಾಗೂ ಎನ್ಐಸಿ ತಾಂತ್ರಿಕ ಸಿಬ್ಬಂದಿ ಒಳಗೊಂಡ ತಂಡವು ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಸಜ್ಜುಗೊಳಿಸಿದೆ.

ನಿಯೋಜಿತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ನವೆಂಬರ್ ೬ರ ಸಂಜೆಯೊಳಗಾಗಿ ಪೂರ್ವಭಾವಿ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದ್ದು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಮಗ್ರ ಮೇಲ್ವಿಚಾರಣೆ ಮತ್ತು ಸಮನ್ವಯದ ಹೊಣೆ ವಹಿಸಿಕೊಂಡಿದ್ದಾರೆ. ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಯಶಸ್ವಿಗೊಳಿಸಲು ಜಿಲ್ಲಾಡಳಿತ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande