
ಬೆಂಗಳೂರು, 03 ನವೆಂಬರ್ (ಹಿ.ಸ.):
ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಡೆಸುತ್ತಿರುವ ಅಭಿಯಾನವನ್ನು ತಮಿಳುನಾಡಿನ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ವ್ಯಂಗ್ಯವಾಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಧ್ವನಿ ಎತ್ತುವುದೇ ತಪ್ಪೇ? ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಸಾಮಾಜಿಕ ವಲಯದಲ್ಲಿ ಕೇಳಿಬಂದಿವೆ.
ಐಟಿ-ಬಿಟಿ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕರವೇ ಉದ್ಯೋಗ ಹಕ್ಕಿನ ಅಭಿಯಾನ ಆರಂಭಿಸಿದೆ.
ಇದರ ಭಾಗವಾಗಿ ವಿವಿಧ ಕಂಪನಿಗಳಿಗೆ ಭೇಟಿ ನೀಡುತ್ತಿರುವ ಸಂಘಟನೆಯ ಕಾರ್ಯಕರ್ತರು, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಆದರೆ, ಕರವೇಯ ಈ ಅಭಿಯಾನವನ್ನು ಟೀಕಿಸಿರುವ ತಮಿಳುನಾಡಿನ ವೆಲ್ಲೂರು ಸಬ್ಡಿವಿಷನ್ ಎಸಿಪಿ ಬಿ.ಎಸ್. ಧನುಷ್ ಕುಮಾರ್, ಉದ್ಯೋಗ ಮಾಡುತ್ತಿರುವವರ ಕೆಲಸಕ್ಕೆ ಅಡ್ಡಿಪಡಿಸುತ್ತಿರುವವರು ನಿರುದ್ಯೋಗಿಗಳು ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಯ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸುವುದು ತಪ್ಪೇ? ಸ್ಥಳೀಯರ ಉದ್ಯೋಗದ ಹಕ್ಕಿನ ಪರವಾಗಿ ಹೋರಾಟ ನಡೆಸುವುದನ್ನು ಅವಹೇಳನ ಮಾಡುವುದು ಸರಿಯೇ? ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R