ಕೇಂದ್ರದ ಪರಿಹಾರ ಮಾನದಂಡಗಳ ಮರುಪರಿಶೀಲನೆಗೆ ಆಗ್ರಹಿಸಿ ಪ್ರಧಾನಿ ಮೋದಿ, ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್ ಗೆ ಡಿಸಿಎಂ ಪತ್ರ
ಬೆಂಗಳೂರು, 03 ನವೆಂಬರ್ (ಹಿ.ಸ.): ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ₹22,400.58 ಕೋಟಿ ಬರ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರವನ್ನು ಆಗ್ರ
ಪ್ರಧಾನಮಂತ್ರಿ ಅವರಿಗೆ ಡಿಸಿಎಂ ಬರೆದ ಪತ್ರ


ಬೆಂಗಳೂರು, 03 ನವೆಂಬರ್ (ಹಿ.ಸ.):

ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ₹22,400.58 ಕೋಟಿ ಬರ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನವೆಂಬರ್ 2ರಂದು ಪ್ರತ್ಯೇಕ ಪತ್ರಗಳನ್ನು ಬರೆದಿರುವ ಅವರು, ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಹಾಗೂ ರಾಜ್ಯದ ಪರಿಷ್ಕೃತ ಮನವಿಯನ್ನು ಸಲ್ಲಿಸಲು ಭೇಟಿಗೆ ಸಮಯ ನೀಡುವಂತೆ ಕೋರಿದ್ದಾರೆ.

ರಾಜ್ಯದ 226 ತಾಲ್ಲೂಕುಗಳು ಬರಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ. ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

₹1,814.85 ಕೋಟಿ ಹೆಚ್ಚುವರಿ ನೆರವಿನ ಬೇಡಿಕೆ

ಕೇಂದ್ರ ಗೃಹ ಸಚಿವಾಲಯವು 2026ರ ಅಕ್ಟೋಬರ್ 26ರಂದು 2026–27ರಿಂದ 2030–31ರ ಅವಧಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿದೆ. ಇದರ ಆಧಾರದಲ್ಲಿ ರಾಜ್ಯದ ಬೆಳೆ ಹಾನಿ ಪರಿಹಾರದ ಅಗತ್ಯವು ₹6,128.70 ಕೋಟಿಯಿಂದ ₹7,943.55 ಕೋಟಿಗೆ ಹೆಚ್ಚಳವಾಗಿದೆ.

ಹೀಗಾಗಿ ₹1,814.85 ಕೋಟಿ ಹೆಚ್ಚುವರಿ ನೆರವು ಅಗತ್ಯವಾಗಿದ್ದು, ಈ ಹಿಂದೆ ₹20,585.73 ಕೋಟಿಯಾಗಿದ್ದ ರಾಜ್ಯದ ಒಟ್ಟು ಬರ ಪರಿಹಾರದ ಬೇಡಿಕೆಯನ್ನು ₹22,400.58 ಕೋಟಿಗೆ ಪರಿಷ್ಕರಿಸಲಾಗಿದೆ. ಹಿಂದಿನ ಮನವಿಯಲ್ಲಿನ ಇತರ ಅಂಶಗಳು ಬದಲಾಗಿಲ್ಲ ಎಂದು ಪರಮೇಶ್ವರ ತಿಳಿಸಿದ್ದಾರೆ.

ಕೇಂದ್ರದ ಪರಿಹಾರ ಮಾನದಂಡಗಳ ಪರಿಷ್ಕರಣೆಯನ್ನು ಸ್ವಾಗತಿಸಿರುವ ಅವರು, ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರ ಜತೆಗೆ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯ ತೀವ್ರತೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪರಿಹಾರದ ಮೊತ್ತ ರೈತರ ನೈಜ ಆರ್ಥಿಕ ಸಂಕಷ್ಟಕ್ಕೆ ಹೋಲಿಸಿದರೆ ಸಾಕಾಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ಮಾನದಂಡಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹11 ಸಾವಿರ, ನೀರಾವರಿ ಬೆಳೆಗಳಿಗೆ ₹22 ಸಾವಿರ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹30 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರ ಕೂಲಿ, ನೀರಾವರಿ ಸೇರಿದಂತೆ ಕೃಷಿಗೆ ತಗಲುವ ವಾಸ್ತವ ವೆಚ್ಚಕ್ಕೆ ಹೋಲಿಸಿದರೆ ಈ ಮೊತ್ತ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

2026ರ ಕೃಷಿ ವೆಚ್ಚ ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಮಾನದಂಡಗಳನ್ನು ರೂಪಿಸಬೇಕು. ರೈತರು ಬೆಳೆ ಬೆಳೆಯಲು ಮಾಡಿದ ನೈಜ ಖರ್ಚು ಹಾಗೂ ಅನುಭವಿಸಿದ ನಷ್ಟವನ್ನು ಪರಿಗಣಿಸದಿದ್ದರೆ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಬರ ಪರಿಹಾರಕ್ಕೆ ಅರ್ಹ ರೈತರನ್ನು ಗುರುತಿಸಲು 2015–16ರ ಕೃಷಿ ಗಣತಿಯ ದತ್ತಾಂಶ ಬಳಸುತ್ತಿರುವುದಕ್ಕೆ ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದಿನ ಮಾಹಿತಿ ಈಗಿನ ರೈತರ ಭೂಹಿಡುವಳಿ ಮತ್ತು ಕೃಷಿ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಇದರಿಂದ ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಾದ ಎಫ್‌ಆರ್‌ಯುಐಟಿಎಸ್‌ (FRUITS) ದತ್ತಾಂಶವನ್ನು ಬಳಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಇದರಲ್ಲಿ ರೈತರ ಇತ್ತೀಚಿನ ಹಾಗೂ ಪರಿಶೀಲಿತ ಮಾಹಿತಿ ಲಭ್ಯವಿರುವುದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.

ಕೃಷಿಯ ನೈಜ ವೆಚ್ಚ, ಇತ್ತೀಚಿನ ಭೂಹಿಡುವಳಿ ದಾಖಲೆಗಳು, ರೈತರ ಜೀವನೋಪಾಯದ ರಕ್ಷಣೆ ಹಾಗೂ ಹವಾಮಾನ ವೈಪರೀತ್ಯದಿಂದ ಹೆಚ್ಚುತ್ತಿರುವ ನಷ್ಟವನ್ನು ಆಧರಿಸಿ ವಿಪತ್ತು ಪರಿಹಾರ ವ್ಯವಸ್ಥೆಯನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರದ ತುರ್ತು ಮಧ್ಯಪ್ರವೇಶಕ್ಕೆ ಮನವಿ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಸಾಕಾರಗೊಳ್ಳಬೇಕಾದರೆ ರೈತರ ಸಂಕಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಅತ್ಯಗತ್ಯ ಎಂದು ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.

ಒಂದು ಮುಂಗಾರು ವೈಫಲ್ಯದಿಂದ ರೈತರ ಹಲವು ವರ್ಷಗಳ ಪರಿಶ್ರಮ ವ್ಯರ್ಥವಾಗಿ, ಕುಟುಂಬದ ಉಳಿತಾಯ ಖಾಲಿಯಾಗಿ, ಮುಂದಿನ ಪೀಳಿಗೆಯ ಭವಿಷ್ಯವೇ ಅನಿಶ್ಚಿತತೆಗೆ ಸಿಲುಕುವ ಪರಿಸ್ಥಿತಿ ಮುಂದುವರಿದರೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಪರಿಷ್ಕೃತ ಮನವಿ ಪರಿಶೀಲನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನಿಯಮಾನುಸಾರ ಮಂಜೂರು ಮಾಡಬಹುದಾದ ಪರಿಹಾರ ಮೊತ್ತವನ್ನು ಆದಷ್ಟು ಬೇಗ ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಒತ್ತಾಯಿಸಿದ್ದಾರೆ.

ರೈತರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ಅಡ್ಡಿಯಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಆಶಯದಂತೆ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.

ರೈತರಿಗೆ ಕೇವಲ ಸಹಾನುಭೂತಿ ಅಥವಾ ಅಲ್ಪ ಪ್ರಮಾಣದ ಪರಿಹಾರ ಹೆಚ್ಚಳ ಸಾಕಾಗುವುದಿಲ್ಲ. ಅವರು ಅನುಭವಿಸಿರುವ ನಷ್ಟಕ್ಕೆ ಅನುಗುಣವಾಗಿ ನ್ಯಾಯಯುತವಾದ ಆರ್ಥಿಕ ನೆರವು ಸಕಾಲದಲ್ಲಿ ದೊರೆಯಬೇಕು. ಭೀಕರ ಬರದಿಂದ ಉಂಟಾಗಿರುವ ಸಂಕಷ್ಟವನ್ನು ರೈತ ಕುಟುಂಬಗಳೇ ಸಂಪೂರ್ಣವಾಗಿ ಎದುರಿಸುವಂತಾಗಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಡಾ. ಜಿ. ಪರಮೇಶ್ವರ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande