
ಬೆಂಗಳೂರು, 03 ನವೆಂಬರ್ (ಹಿ.ಸ.):
ಕರ್ನಾಟಕದ ತಂಬಾಕು ಉತ್ಪನ್ನಗಳ ಉತ್ಪಾದನಾ ಸಂಸ್ಥೆಗಳ ಪ್ರತಿನಿಧಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರದ ವಡ್ಗಾಂವ್ ಪೊಲೀಸರು ನೀಡಿದ್ದ ನೋಟಿಸ್ ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲ್ಲದೆ, ತುಮಕೂರಿನ ಉದ್ಯಮಿಗಳ ಕಚೇರಿಯಿಂದ ವಶಪಡಿಸಿಕೊಂಡಿದ್ದ ಲೆಡ್ಜರ್ ಪುಸ್ತಕಗಳು ಹಾಗೂ ಇತರ ದಾಖಲೆಗಳನ್ನು ಕೂಡಲೇ ಹಿಂದಿರುಗಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಕರ್ನಾಟಕದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ವ್ಯಕ್ತಿಗಳನ್ನು ವಿಚಾರಣೆಗಾಗಿ ಮಹಾರಾಷ್ಟ್ರಕ್ಕೆ ಹಾಜರಾಗುವಂತೆ ಬಿಎನ್ಎಸ್ಎಸ್ ಸೆಕ್ಷನ್ 179ರ ಅಡಿಯಲ್ಲಿ ನೋಟಿಸ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಪನಿಗಳು
2025ರ ಆಗಸ್ಟ್ನಲ್ಲಿ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದಿದ್ದ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿತ್ತಾದರೂ, ಅದರಲ್ಲಿ ಹೆಸರಿಲ್ಲದ ತುಮಕೂರಿನ ಶಿವ ಎಂಟರ್ಪ್ರೈಸಸ್ ಸೇರಿದಂತೆ ಇತರ ಸಂಸ್ಥೆಗಳ ಕಚೇರಿಗಳಿಗೂ ವಡ್ಗಾಂವ್ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ವಿಚಾರಣೆ ನಡೆಸಿದ್ದರು.
ಸುಮಾರು 5ರಿಂದ 6 ಮಂದಿ ಪೊಲೀಸ್ ಸಿಬ್ಬಂದಿ ತುಮಕೂರಿನ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಕಂಪನಿಗಳ ಪಾಲುದಾರರಿಗೆ ನೋಟಿಸ್ ಜಾರಿಗೊಳಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಂಬಂಧಿತ ಕಂಪನಿಗಳು ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು.
ದಾಖಲೆಗಳ ವಶಪಡಿಸಿಕೊಳ್ಳುವಿಕೆ ಕಾನೂನುಬಾಹಿರ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ತುಮಕೂರಿನಲ್ಲಿರುವ ಅರ್ಜಿದಾರರ ಕಚೇರಿಗಳಿಂದ ವ್ಯಾಪಾರಕ್ಕೆ ಸಂಬಂಧಿಸಿದ ದಾಖಲೆಗಳು, ಲೆಡ್ಜರ್ ಪುಸ್ತಕಗಳು ಹಾಗೂ ಅವುಗಳ ಪ್ರತಿಗಳನ್ನು ವಶಪಡಿಸಿಕೊಂಡಿರುವುದು ಕಾನೂನುಬಾಹಿರ ಎಂದು ಘೋಷಿಸಿದ್ದಾರೆ. ವಶಪಡಿಸಿಕೊಂಡಿರುವ ಲೆಡ್ಜರ್ ಪುಸ್ತಕಗಳನ್ನು ಕೂಡಲೇ ಸಂಬಂಧಪಟ್ಟವರಿಗೆ ಹಿಂದಿರುಗಿಸುವಂತೆಯೂ ನಿರ್ದೇಶಿಸಿದ್ದಾರೆ.
ಕರ್ನಾಟಕ ಪೊಲೀಸರಿಗೆ ಮುಂಚಿತ ಮಾಹಿತಿ ಕಡ್ಡಾಯ
ಇನ್ನು ಮುಂದೆ ಕರ್ನಾಟಕದ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಪೊಲೀಸರು ಯಾವುದೇ ತನಿಖಾ ಕಾರ್ಯಾಚರಣೆ ನಡೆಸಬೇಕಾದರೆ, ಸಂಬಂಧಪಟ್ಟ ಸ್ಥಳೀಯ ಕರ್ನಾಟಕ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮುಂಚಿತವಾಗಿ ಲಿಖಿತ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಆದರೆ, ಪ್ರಕರಣದ ಎಫ್ಐಆರ್ ರದ್ದುಗೊಳಿಸುವಂತೆ ಹಾಗೂ ಮಹಾರಾಷ್ಟ್ರ ಪೊಲೀಸರು ಅರ್ಜಿದಾರರನ್ನು ಸಂಪರ್ಕಿಸುವುದನ್ನೇ ಸಂಪೂರ್ಣವಾಗಿ ನಿರ್ಬಂಧಿಸುವಂತೆ ಸಲ್ಲಿಸಲಾಗಿದ್ದ ಮನವಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ಮೂಲಕ ಹೊರರಾಜ್ಯದ ಪೊಲೀಸರು ಮತ್ತೊಂದು ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ನಡೆಸುವಾಗ ಅನುಸರಿಸಬೇಕಾದ ಕಾನೂನು ಪ್ರಕ್ರಿಯೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವನ್ನು ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R