ಸಚಿವ ಕಾಶಪ್ಪನವರ ವಿರುದ್ದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಾಗ್ದಾಳಿ
ಬಾಗಲಕೋಟೆ, 03 ನವೆಂಬರ್ (ಹಿ.ಸ.) ಸಚಿವ ವಿಜಯಾನಂದ ಕಾಶಪ್ಪನವರ ವಿರುದ್ಧ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಭೂ ವ್ಯವಹಾರಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, “ಹೇಡಿ ನಾನಲ್ಲ,
ತೀವ್ರ ವಾಗ್ದಾಳಿ


ಬಾಗಲಕೋಟೆ, 03 ನವೆಂಬರ್ (ಹಿ.ಸ.)

ಸಚಿವ ವಿಜಯಾನಂದ ಕಾಶಪ್ಪನವರ ವಿರುದ್ಧ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಭೂ ವ್ಯವಹಾರಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, “ಹೇಡಿ ನಾನಲ್ಲ, ಕಾಶಪ್ಪನವರ ಹೇಡಿ” ಎಂದು ಸಚಿವ ವಿಜಯಾನಂದ ಕಾಶಪ್ಪನವರ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಹಿಂದೆ ನಡೆದಿರುವ ಆಡಳಿತ ಮತ್ತು ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಇದೀಗ ತಾಲೂಕಿನ ನಂತರ ಇಡೀ ಜಿಲ್ಲೆಯನ್ನೇ ಹಾಳು ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ಜಮೀನುಗಳನ್ನು ಪರಿವರ್ತನೆ ಮಾಡಿ ಪ್ಲಾಟ್ಗಳಾಗಿ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಹಣ ಅಥವಾ ಜಮೀನಿನ ರೂಪದಲ್ಲಿ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ದೊಡ್ಡನಗೌಡ ಪಾಟೀಲ ಮಾಡಿದರು.

“ತಾಲೂಕಿನಲ್ಲಿ ಎನ್ಎ ಮಾಡಿಸಿದರೆ, ಪ್ಲಾಟ್ ಮಾಡಿಸಿದರೆ ಅವರಿಂದ ಎಕರೆಗೆ ₹5 ಲಕ್ಷ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ಎರಡು ಪ್ಲಾಟ್ಗಳನ್ನು ಕೊಡಬೇಕು ಎಂಬ ರೀತಿಯ ಪರಿಸ್ಥಿತಿ ಇದೆ” ಎಂದು ಅವರು ಆರೋಪಿಸಿದರು. ಈ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟವರು ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

“ಮುಂಚೆ ತಾಲೂಕನ್ನು ಹಾಳು ಮಾಡಿದ್ದು. ಈಗ ಇಡೀ ಜಿಲ್ಲೆಯನ್ನೇ ಹಾಳು ಮಾಡಲು ಮುಂದಾಗಿದ್ದಿರಾ” ಎಂದು ಪ್ರಶ್ನಿಸಿದ ಅವರು, ಅಧಿಕಾರ ಮತ್ತು ಆಡಳಿತವನ್ನು ಜನರ ಹಿತಕ್ಕಾಗಿ ಬಳಸಬೇಕು. ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಳಸಬಾರದು ಎಂದು ಟೀಕಿಸಿದರು.

ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಲು ಹಾಗೂ ಆಡಳಿತದ ಕಾರ್ಯವೈಖರಿಯ ಕುರಿತು ಮಾಹಿತಿ ಕೇಳಲು ಸಂಪೂರ್ಣ ಹಕ್ಕು ಹೊಂದಿದ್ದಾರೆ. ಪ್ರಶ್ನೆ ಕೇಳಿದವರ ಮೇಲೆ ವೈಯಕ್ತಿಕವಾಗಿ ವಾಗ್ದಾಳಿ ನಡೆಸುವ ಬದಲು, ಆರೋಪಗಳಿಗೆ ದಾಖಲೆಗಳ ಮೂಲಕ ಉತ್ತರ ನೀಡಬೇಕು ಎಂದು ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪಾರದರ್ಶಕ ಆಡಳಿತ ಅಗತ್ಯವಿದ್ದು, ಭೂ ಪರಿವರ್ತನೆ, ಪ್ಲಾಟ್ಗಳ ಅಭಿವೃದ್ಧಿ ಸೇರಿದಂತೆ ಸಾರ್ವಜನಿಕರಿಗೆ ಸಂಬಂಧಿಸಿದ ಯಾವುದೇ ವ್ಯವಹಾರಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande