
ದಾವಣಗೆರೆ, 03 ನವೆಂಬರ್ (ಹಿ.ಸ.):
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಿಸಿರುವುದನ್ನು ಖಂಡಿಸಿ ದಾವಣಗೆರೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕೆ.ಬಿ. ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತದ ಮೂಲಕ ಮಹಾನಗರ ಪಾಲಿಕೆ ವೃತ್ತದವರೆಗೆ ಸಾಗಿತು. ಈ ವೇಳೆ ಮಹಿಳಾ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಹಾಲಿನ ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ವೃತ್ತದಲ್ಲಿ ಹಾಲಿಲ್ಲದೆ ಚಹಾ ತಯಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಹಿಳೆಯರು ಹಾಲಿನ ಕ್ಯಾನ್ಗಳನ್ನು ತಲೆಯ ಮೇಲೆ ಹೊತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು, ರಾಜ್ಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದರ ನಡುವೆ ಹಾಲಿನ ದರ ಹೆಚ್ಚಿಸುವ ಮೂಲಕ ಸರ್ಕಾರ ಜನರ ಜೇಬಿಗೆ ಮತ್ತಷ್ಟು ಹೊರೆ ಹಾಕಿದೆ ಎಂದು ಆರೋಪಿಸಿದರು.
ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಹೊರೆ ಹೆಚ್ಚುತ್ತಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವ ಬದಲು ಹಾಲಿನ ದರವನ್ನೂ ಹೆಚ್ಚಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಜನವಿರೋಧಿಯಾಗಿದೆ.
ಸರ್ಕಾರದ ಈ ನಡೆಯನ್ನು ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆ.ಬಿ. ಬಡಾವಣೆಯ ಬಿಜೆಪಿ ಕಾರ್ಯಾಲಯದಿಂದ ಎ.ಸಿ. ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ತನ್ನ ಆಕ್ರೋಶ ವ್ಯಕ್ತಪಡಿಸಿತು.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R