ಬೆಂಗಳೂರಿನಲ್ಲಿ ಹೊರಜಿಲ್ಲೆಗಳ ಇಂಧನ ಟ್ಯಾಂಕರ್ಗಳ ಸಂಚಾರಕ್ಕೆ ನಿರ್ಬಂಧ
ಟ್ರಾಫಿಕ್ ನಿಯಂತ್ರಣಕ್ಕೆ ಸಂಚಾರ ಪೊಲೀಸರ ಹೊಸ ನಿಯಮ; ನೈಸ್, ಎಸ್ಟಿಆರ್ಆರ್ ರಸ್ತೆ ಬಳಕೆಗೆ ಸೂಚನೆ
Bengaluru Traffic Police Restrict Movement of Outstation Fuel Tankers, Direct Them to NICE Road and STRR


ಬೆಂಗಳೂರು, 03 ನವೆಂಬರ್ (ಹಿ.ಸ.):

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ಭಾರಿ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದ್ದಾರೆ.

ನಗರದ ಮೂಲಕ ಹಾದುಹೋಗಿ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ತೆರಳುವ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಟ್ಯಾಂಕರ್ಗಳ ನಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇಂತಹ ವಾಹನಗಳು ಇನ್ನು ಮುಂದೆ ನೈಸ್ ರಸ್ತೆ ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ದೇವರಗುಂದಿಯಿಂದ ಪ್ರತಿದಿನ 1,000 ಟ್ಯಾಂಕರ್ಗಳ ಸಂಚಾರ

ಹೊಸಕೋಟೆ ತಾಲೂಕಿನ ದೇವರಗುಂದಿಯಿಂದ ಪ್ರತಿದಿನ ಸುಮಾರು 800ರಿಂದ 1,000 ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಟ್ಯಾಂಕರ್ಗಳು ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ತೆರಳುತ್ತಿವೆ.

ಈ ಟ್ಯಾಂಕರ್ಗಳ ಸಂಚಾರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದು ಸಂಚಾರ ಪೊಲೀಸರ ಗಮನಕ್ಕೆ ಬಂದಿದೆ.

2014ರಲ್ಲೇ ಬೆಂಗಳೂರಿನಲ್ಲಿ ಬೆಳಗಿನ ವೇಳೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿಯಂತಹ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವಾಹನಗಳಿಗೆ ದಿನದ 24 ಗಂಟೆಯೂ ಸಂಚರಿಸಲು ವಿನಾಯಿತಿ ನೀಡಲಾಗಿತ್ತು.

ಇದೀಗ ಈ ವಿನಾಯಿತಿಯಡಿ ಹೊರಜಿಲ್ಲೆಗಳಿಗೆ ತೆರಳುವ ಟ್ಯಾಂಕರ್ಗಳೂ ನಗರದೊಳಗೆ ಸಂಚರಿಸುತ್ತಿರುವುದರಿಂದ ಸಂಚಾರದ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ.

ನಗರದ ಇಂಧನ ಪೂರೈಕೆ ವಾಹನಗಳಿಗೆ ವಿನಾಯಿತಿ

ಹೊಸ ನಿಯಮದ ಪ್ರಕಾರ, ಬೆಂಗಳೂರಿನಲ್ಲಿರುವ ಪೆಟ್ರೋಲ್ ಬಂಕ್ಗಳು ಹಾಗೂ ಗ್ಯಾಸ್ ವಿತರಣಾ ಕೇಂದ್ರಗಳಿಗೆ ಇಂಧನ ಪೂರೈಸುವ ಟ್ಯಾಂಕರ್ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಆದರೆ ನಗರದ ಮೂಲಕ ಹಾದುಹೋಗಿ ಬೇರೆ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಗೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸಾಗಿಸುವ ಟ್ಯಾಂಕರ್ಗಳು ಇನ್ನು ಮುಂದೆ ನಗರದೊಳಗೆ ಪ್ರವೇಶಿಸುವಂತಿಲ್ಲ.

ಇಂತಹ ವಾಹನಗಳು ತಮ್ಮ ಗಮ್ಯಸ್ಥಾನ ತಲುಪಲು ನೈಸ್ ರಸ್ತೆ ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಬಳಸಬೇಕೆಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ

ಹೊರಜಿಲ್ಲೆಗಳ ಟ್ಯಾಂಕರ್ಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಿರುವುದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಭಾರಿ ವಾಹನಗಳ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande