
ಬೆಂಗಳೂರು, 03 ನವೆಂಬರ್ (ಹಿ.ಸ.);
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಚಿನ್ನದ ಸರ ಕಸಿಯಲು ಯತ್ನಿಸಿದ ಘಟನೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ನಡೆದಿದೆ.
ಮಹಿಳೆಯ ಸಮಯಪ್ರಜ್ಞೆ ಹಾಗೂ ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಅಕ್ಟೋಬರ್ 31ರಂದು ಬೆಳಗ್ಗೆ ಸುಮಾರು 11.45ರ ವೇಳೆಗೆ ಈ ಘಟನೆ ನಡೆದಿದೆ. 40 ವರ್ಷದ ಪ್ರಭುರಾಜ್ ಎಂಬಾತ ಶೂ ರಿಪೇರಿ ಅಂಗಡಿಗೆ ತೆರಳಿ, ಆಶ್ರಯ ಪಡೆಯುವ ನೆಪದಲ್ಲಿ ಒಳನುಗ್ಗಿದ್ದಾನೆ.
ಈ ವೇಳೆ ಅಂಗಡಿಯಲ್ಲಿದ್ದ ಮಹಿಳಾ ಸಿಬ್ಬಂದಿಗೆ ಚಾಕು ತೋರಿಸಿ, ಕೊರಳಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ನೀಡುವಂತೆ ಬೆದರಿಕೆ ಹಾಕಿದ್ದಾನೆ. ಸರ ನೀಡದಿದ್ದರೆ ಚಾಕುವಿನಿಂದ ಇರಿಯುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.
ಮಹಿಳೆ ಪ್ರತಿರೋಧ ವ್ಯಕ್ತಪಡಿಸಿ ಕೂಗಿಕೊಂಡಾಗ, ಆರೋಪಿ ಆಕೆಯನ್ನು ಹಿಡಿದಿಟ್ಟುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲದೆ, ಆಕೆಯ ಕೈಗಳನ್ನು ಮೇಜಿಗೆ ಅಂಟಿಸಲು ಫೆವಿಕ್ವಿಕ್ ಬಳಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಅಂಗಡಿಯೊಳಗೆ ಧಾವಿಸಿ, ಚಾಕು ಹಿಡಿದಿದ್ದ ಆರೋಪಿಯನ್ನು ಧೈರ್ಯದಿಂದ ಹಿಡಿದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.
ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಸಿಯುವ ಯತ್ನ ವಿಫಲವಾಗಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 309(6) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನೇ?
ವಿಚಾರಣೆ ವೇಳೆ ಆರೋಪಿ ಪ್ರಭುರಾಜ್ ಮಾನಸಿಕವಾಗಿ ಅಸ್ವಸ್ಥನಾಗಿರುವಂತೆ ಹಾಗೂ ತೀವ್ರ ಖಿನ್ನತೆಯಿಂದ ಬಳಲುತ್ತಿರುವಂತೆ ಕಂಡುಬಂದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿಂದೆ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಿದ್ದ ಎನ್ನಲಾಗಿರುವ ಆತನ ಹಿನ್ನೆಲೆ, ವೈದ್ಯಕೀಯ ಇತಿಹಾಸ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R